ಬೆಂಗಳೂರು:ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶ ನಮಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಸ್ ಸಿ, ಎಸ್ಟಿಗೆ ಮೀಸಲಾತಿ ಅನ್ವಯ ಎಂದು ಸುಪ್ರೀಂಕೋರ್ಟ್ ಆದೇಶ ಆಗಿದೆ. ಆದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಗೊಂದಲ ಆಗಿದೆ. ಹೀಗಾಗಿ, ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಕಡಿಮೆ ಎಂದು ಪರೋಕ್ಷವಾಗಿ ಹೇಳಿದರು.
ಚುನಾವಣೆ ನಡೆಸುವುದಕ್ಕೆ ನಾವು ಮನವಿ ಕಳಿಸಿದ್ದೆವು. ಡಿಲಿಮಿಟೇಶನ್, ರಿಸರ್ವೇಶನ್ ಬಗ್ಗೆ ಬಿಲ್ ತಂದೆವು. ನಾವು ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕೆಂದು ತೀರ್ಮಾನಿಸಿದ್ದೆವು. ಹಾಗಾಗಿ, ಚುನಾವಣೆ ಮುಂದಕ್ಕೆ ಹೋಗಿದೆ. ಸುಪ್ರೀಂ ತೀರ್ಪಿನ ಬಗ್ಗೆ ತಜ್ಞರ ಜೊತೆ ಚರ್ಚಿಸಬೇಕು. ಹಾಗೆ ನೋಡಿದರೆ ಚುನಾವಣೆ ಅಸಾಧ್ಯ. ನಂತರ ಇದರ ಬಗ್ಗೆ ನಿರ್ಧರಿಸಬೇಕು ಎಂದರು.
ಚುನಾವಣೆ ನಡೆಸುವುದಕ್ಕೆ ನಾವು ಹಿಂದೇಟು ಹಾಕುತ್ತಿಲ್ಲ. ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಘೋಷಣೆ ಮಾಡಿದೆ. ಆದರೆ, ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ 780 ಆಕ್ಷೇಪಗಳು ಬಂದವು. ಆ ಕಾರಣಕ್ಕಾಗಿ ಬಿಲ್ ತರಲಾಯಿತು. ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಈಗ ಸುಪ್ರೀಂ ಕೋರ್ಟ್ನಲ್ಲಿ ಆದೇಶ ಬಂದಿದೆ.