ಶಿವಮೊಗ್ಗ :ಸಿದ್ದರಾಮಯ್ಯ ರಾಜ್ಯ ಸರ್ಕಾರದ ಕುರಿತು ದಾರಿಯಲ್ಲಿ ಹೋಗುವ ಕುಡುಕನ ರೀತಿ ಮಾತನಾಡಬಾರದು ಎಂದು ಸಚಿವ ಈಶ್ವರಪ್ಪ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರ 'ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಸರ್ಕಾರ ಐಸಿಯುನಲ್ಲಿದೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಆಗಿದ್ರಾ?, ಈಗ ವಿರೋಧ ಪಕ್ಷದ ನಾಯಕರಾಗಿದ್ರಾ? ಎಂದು ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯನವರು ತಾವು ಸಿಎಂ ಆಗಿದ್ದೆ ಎಂಬುದನ್ನು ಮರೆತು ದಾರಿಯಲ್ಲಿ ಹೋಗುವ ಕುಡುಕನ ರೀತಿ ಮಾತನಾಡುತ್ತಿದ್ದಾರೆ ಎಂದ್ರು.
ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿದ ಮೇಲೆ ನಾನು ಬದುಕಿದ್ಧೇನೆ ಎಂದು ಹೇಳುವುದಕ್ಕೆ ಏನಾದ್ರೂ ಒಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಸಿಎಂ ಕೋವಿಡ್ ಬಂದು ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಲೇ ರಾಜ್ಯ ನಡೆಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಗೊತ್ತಿದೆ. ಸಿದ್ದರಾಮಯ್ಯನವರು ಸಿಎಂ ಹಾಗೂ ರಾಜ್ಯ ಸರ್ಕಾರವನ್ನು ಟೀಕೆ ಮಾಡುತ್ತಲೆ ಇರುತ್ತಾರೆ.
ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಆಕ್ರೋಶ ಇಂತಹವರು ಸಿಎಂ ಆಗಿದ್ರಲ್ಲಾ ಎಂಬ ನೋವುವಾಗುತ್ತಿದೆ. ಹಿಂದಿನ ಸಿಎಂಗಳು ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನ ನೀಡುತ್ತಿದ್ದಾರೆ. ಅವರು ವಿರೋಧ ಪಕ್ಷದ ನಾಯಕನ ಘನತೆ ಮರೆತು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಲು ಹಾಗೂ ಸಿಎಂ ಆಗಲು ಆಯೋಗ್ಯ ಎಂದು ಕಿಡಿಕಾರಿದರು.
ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲಿಸಿ ಸರ್ಕಾರವನ್ನು ಕೆಡವಿದರು. ರಾಜ್ಯದ ಜನ ಇವನು ಅಯೋಗ್ಯ ಇವರ ಕೈಯಲ್ಲಿ ಅಧಿಕಾರ ನೀಡಿದ್ರೆ, ಪ್ರಯೋಜನವಿಲ್ಲ ಎಂದು ಸೋಲಿಸಿದರು. ಸರ್ಕಾರ ಐಸಿಯುನಲ್ಲಿದೆ ಎಂದು ಹೇಳಿದ್ರೆ ಏನರ್ಥ, ಅದಕ್ಕೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿರಲು ಅಯೋಗ್ಯ ಎಂದರು.
ಚುನಾವಣೆಗಳು ನಡೆಯುತ್ತಿರುತ್ತವೆ, ಅಂತರ ಕಾಪಾಡಿಕೊಂಡು ಮನೆ-ಮನೆ ಪ್ರಚಾರ ನಡೆಸಬೇಕೆಂದು ನಮ್ಮ ಪಕ್ಷ ತೀರ್ಮಾನಿಸಿದೆ. ಅದಕ್ಕೆ ಬದ್ದವಾಗಿ ನಾವು ಪ್ರಚಾರ ಮಾಡ್ತಿದ್ದೇವೆ. ಇಂದು ಸಂಜೆ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಿದ್ದೇವೆ. ನಾಳೆಯಿಂದ ಬೆಳಗ್ಗೆ- ಸಂಜೆ ಆರು ಸಭೆ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ಇದೇ ವೇಳೆ ತಿಳಿಸಿದ್ರು.