ಶಿವಮೊಗ್ಗ :ಮೇಕೆದಾಟು ಯೋಜನೆಗೆ ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆಯುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿ ಭದ್ರಾ ಜಲಾಶಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರು ಹಾಗೂ ಜಲ ವಿದ್ಯುತ್ ಯೋಜನೆಯಾಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ನೀರನ್ನು ನದಿಗೆ ಬಿಡಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕಬೇಡ.
ಈ ಯೋಜನೆ ನಡೆಸಲು ರಾಜ್ಯ ಸರ್ಕಾರ ಸದಾ ಸಿದ್ಧವಿದೆ. ನೀರು ಹಂಚಿಕೆಯ ನ್ಯಾಯಾಧೀಕರಣದಲ್ಲಿ ನಮಗೆ ಲಭ್ಯವಿರುವ ನೀರಿನಲ್ಲಿ ಯೋಜನೆ ನಡೆಸಲು ನಾವು ಸರ್ವ ಸ್ವತಂತ್ರರಾಗಿದ್ದೇವೆ ಎಂದರು.
ಈ ಯೋಜನೆ ನಡೆಸಲು ಯಾವುದೇ ಅಡೆತಡೆಗಳಿಲ್ಲ. ನಮ್ಮ ಪಾಲಿನ ನೀರನ್ನು ಬಳಸಲು ಯಾರ ಅಪ್ಪಣೆ ಬೇಕಾಗಿಲ್ಲ. ಈಗಾಗಲೇ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದೇವೆ. ಖಂಡಿತವಾಗಿ ಈ ಯೋಜನೆ ಮಾಡುತ್ತೇವೆ ಎಂದರು.
ತಮಿಳುನಾಡು ಬಿಜೆಪಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ನೆಲ, ಜಲ ವಿಚಾರದಲ್ಲಿ ನಮ್ಮದು ಯಾವುದೇ ರಾಜಿ ಇಲ್ಲ ಎಂದರು.
57 ಸಾವಿರ ಕೋಟಿ ರೂ. ಕಾಮಗಾರಿ ಚಾಲನೆಯಲ್ಲಿವೆ :ರಾಜ್ಯದಲ್ಲಿ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಸುಮಾರು 57 ಸಾವಿರ ಕೋಟಿ ರೂ. ಯೋಜನೆಗಳು ಚಾಲ್ತಿಯಲ್ಲಿವೆ. ಈ ಎಲ್ಲಾ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಉತ್ತಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಎಂ ಬೊಮ್ಮಾಯಿ ಅವರು 5 ವರ್ಷ ಈ ಇಲಾಖೆಯನ್ನು ನಡೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ :ಕರ್ನಾಟಕ ರಾಜ್ಯದ ಜೀವನಾಡಿ ಭದ್ರಾ ಜಲಾಶಯಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಬಾಗಿನ ಅರ್ಪಿಸಿದರು.
ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವರು ಭದ್ರಾ ಜಲಾಶಯ ತುಂಬಿ ಕಳೆದ ವಾರದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದಲ್ಲಿ 184.9 ಅಡಿ ನೀರಿದೆ. ಜಲಾಶಯದ ಗರಿಷ್ಟ ಎತ್ತರ 186 ಅಡಿ ಇದ್ದು, 5,239 ಕ್ಯೂಸೆಕ್ ಒಳ ಹರಿವಿದೆ.
ಓದಿ: ಕಾರು ತಪಾಸಣೆ ವೇಳೆ ಡ್ರೈವರ್ ದುರ್ವತನೆ..ಪೊಲೀಸ್ ಸಿಬ್ಬಂದಿಗೆ ಗುದ್ದಿ, ಪರಾರಿಯಾದ ಚಾಲಕ!
4,336 ಕ್ಯೂಸೆಕ್ ಹೊರ ಹರಿವಿದೆ. ಜಲಾಶಯವು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿ 6ಕ್ಕೂ ಅಧಿಕ ಜಿಲ್ಲೆಗೆ ಕುಡಿಯುವ ನೀರು ಹಾಗೂ ಕೃಷಿಗೆ ಉಪಯೋಗವಾಗುತ್ತದೆ.ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ದಾವಣಗೆರೆ ಸಂಸದ ಸಿದ್ದೇಶ್ವರ್ ಅವರು ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಶಾಸಕರುಗಳು, ದಾವಣಗೆರೆ ಜಿಲ್ಲೆ ಶಾಸಕರುಗಳು ಹಾಜರಿದ್ದರು.