ಬೆಂಗಳೂರು:ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷ ನಾಯಕರು ವಿಧಾನಪರಿಷತ್ನಲ್ಲಿ ಒತ್ತಾಯಿಸಿ, ಒತ್ತಡ ಹೇರಿದ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ಅವಧಿ ನಂತರ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಆದರೆ ಅದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುತ್ತೇನೆ. ಚರ್ಚೆಗೆ ಪ್ರಶ್ನೋತ್ತರ ಅವಧಿ ನಂತರ ಅವಕಾಶ ನೀಡುತ್ತೇನೆ ಎಂದರು.
ವಿಷಯ ಓದಿ ಬಿಡುತ್ತೇವೆ. ಅವಕಾಶ ನೀಡಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು. ಸಾಧ್ಯವಿಲ್ಲ ಎಂದಾಗ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಪೀಠದಿಂದ ಎದ್ದು ನಿಂತು ಸಭಾಪತಿಗಳು ಈ ಮನೆಗೆ ವಿಶೇಷ ಗೌರವ ಇದೆ. ಪ್ರಶ್ನೋತ್ತರ ಅವಧಿ ನಂತರ ಅವಕಾಶ ಕೊಡುತ್ತೇವೆ. ಅಲ್ಲಿಯವರೆಗೂ ಸಹಕರಿಸಿ ಎಂದು ಮನವಿ ಮಾಡಿದರು.
ಆಗ ಪ್ರತಿಪಕ್ಷ ಸದಸ್ಯರು ನಾವು ನಿಮಗೆ ಗೌರವಿಸುತ್ತೇವೆ. ಆದರೆ ರಾಷ್ಟ್ರದ್ರೋಹದ ಕಾರ್ಯ ಆಗಿದೆ. ಅದರ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರ ಆರಂಭವಾದಾಗ ಸಭಾಪತಿಗಳು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.