ಶಿವಮೊಗ್ಗ: ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಎಲ್ಲ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಅದು ಮಹಾರಾಷ್ಟ್ರ ಹೇಡಿಗಳ ಸಮಿತಿ ಎಂದು ಎಂಇಎಸ್ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಾವುದೇ ಸಂಘಟನೆಯನ್ನು ನಿಷೇಧ ಮಾಡುವ ಅಧಿಕಾರ ರಾಜ್ಯಕ್ಕೆ ಇಲ್ಲ. ಕೇಂದ್ರ ನಿಷೇಧ ಮಾಡಬೇಕಿದೆ. ಈ ಕುರಿತ ಎಲ್ಲ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರವೇ ಒಂದು ನಿರ್ಧಾರ ತೆಗೆದುಕೊಳ್ಳಲಿದೆ. ನೈಟ್ ಕರ್ಫ್ಯೂ ಕುರಿತು ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.
ಮತಾಂತರ ಕಾಯ್ದೆ ಜಾರಿ ಮಾಡುತ್ತೇವೆ
ಮತಾಂತರ ಕಾಯ್ದೆಯನ್ನು ನಾವು ಜಾರಿ ಮಾಡಿಯೇ ಮಾಡುತ್ತೇವೆ. ಈ ಕಾಯ್ದೆಯನ್ನು ಜಾರಿ ಮಾಡುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಹಾಗಿದ್ರೆ, ಮತಾಂತರ ಕಾಯ್ದೆಗೆ ಯಾಕೆ ಸಿದ್ದರಾಮಯ್ಯ ವಿರೋಧ ಮಾಡಿದರು ಎಂದು ಪ್ರಶ್ನೆ ಮಾಡಿದರು. ಸದನದಲ್ಲಿ ಬೇಗ ಒಪ್ಪಿಗೆ ನೀಡಿದ್ರೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸಬಹುದಾಗಿತ್ತು. ಆದರೆ, ಅದನ್ನು ಮಾಡಲಿಲ್ಲ. ಧರಣಿ ಮಾಡಿ ಸಮಯ ಹಾಳು ಮಾಡಿದ್ರು ಎಂದರು.