ಕರ್ನಾಟಕ

karnataka

ETV Bharat / state

ಹೆಚ್ಚುವರಿ ಪಾವತಿ ಮೊತ್ತ ಗುತ್ತಿಗೆದಾರರಿಂದ ವಸೂಲು ಮಾಡಿ: ಸಚಿವ ಈಶ್ವರಪ್ಪ ಸೂಚನೆ - ಗುತ್ತಿಗೆದಾರರಿಂದ ಹೆಚ್ಚುವರಿ ಹಣ ವಸೂಲಿ

ನಿರಂತರ ಜ್ಯೋತಿ ಯೋಜನೆಯ ಅನುಷ್ಠಾನದ ಕುರಿತು ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳ ಸಭೆ ನಡೆಸಿದರು.

Minister Eshwarappa held meeting of officials at Shimogga
ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಲೋಪ

By

Published : Apr 21, 2021, 8:48 AM IST

ಶಿವಮೊಗ್ಗ :ಜಿಲ್ಲೆಯಲ್ಲಿ 'ನಿರಂತರ ಜ್ಯೋತಿ ಯೋಜನೆ'ಯಡಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರೂ ಪಾವತಿ ಮಾಡಲಾಗಿರುವ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿನ ಲೋಪಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಫೀಡರ್ ಬೇರ್ಪಡಿಸುವಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 41 ಮಾರ್ಗಗಳ ಕಾಮಗಾರಿಗೆ 105 ಕೋಟಿ ರೂ. ಬಿಲ್​ ಪಾಸ್​ ಮಾಡಲಾಗಿದೆ. ಪ್ರಸ್ತುತ ಎಲ್ಲಾ ಮಾರ್ಗಗಳ ಕಾಮಗಾರಿ ಅನುಷ್ಠಾನದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ.

ಇದುವರೆಗೆ 28 ಮಾರ್ಗಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ 71.55 ಕೋಟಿ ರೂ. ಬಿಲ್​ ಪಾಸ್​ ಮಾಡಲಾಗಿದೆ. ತಪಾಸಣೆಯಲ್ಲಿ ಸಾಮಾಗ್ರಿಗಳ ಖರೀದಿಯಲ್ಲಿ 4.80 ಕೋಟಿ ರೂ. ಹಾಗೂ ಕಂಬಗಳಿಗೆ ಮಾಡಲಾದ ಕ್ರಾಂಕ್ರೀಟ್‍ನಲ್ಲಿ 3.65ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ. ಭದ್ರಾವತಿಯಲ್ಲಿ ಇನ್ನೂ 10 ಮಾರ್ಗಗಳ ತಪಾಸಣೆ ಕಾರ್ಯ ಬಾಕಿ ಇದ್ದು, ಎಲ್ಲಾ ಮಾರ್ಗಗಳ ತಪಾಸಣೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ : ಕಳೆದ ವರ್ಷಕ್ಕಿಂತ ವೇಗವಾಗಿ ಕೊರೊನಾ ಹರಡುತ್ತಿದೆ: ಸಚಿವ ಎಸ್.ಟಿ.ಸೋಮಶೇಖರ್

ಜಿಲ್ಲೆಯಲ್ಲಿ 2017 ರಲ್ಲಿ ಕಾಮಗಾರಿ ಅನುಷ್ಠಾನ ಪ್ರಾರಂಭಿಸಲಾಗಿದ್ದು, 2020ರ ಮಾರ್ಚ್‍ನಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿತ್ತು. ವಿಳಂಬ ಕಾಮಗಾರಿ ನಿರ್ವಹಿಸಿರುವುದಕ್ಕೆ ದಂಡ ವಿಧಿಸಬೇಕು. ಕಾಮಗಾರಿ ಅನುಷ್ಠಾನ ಪರಿಶೀಲಿಸಲು ತಜ್ಞರ ತಂಡವನ್ನು ರಚಿಸಲಾಗುವುದು. ಈ ತಂಡ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದರು.

ಯೋಜನೆ ಅನುಷ್ಠಾನದ ಪ್ರಮುಖ ಸ್ಥಳಗಳಲ್ಲಿ ಯೋಜನೆ ಕುರಿತಾಗಿ ಮಾಹಿತಿ ಬೋರ್ಡ್ ಅಳವಡಿಸಲಾಗುತ್ತಿದೆ. ಶಿವಮೊಗ್ಗ ವೃತ್ತದಲ್ಲಿ ಅವಾರ್ಡ್ ನೀಡಲಾದ ಪೂರ್ಣ ಮೊತ್ತಕ್ಕೆ ಇಂಡಿಮ್ನಿಟಿ ಬಾಂಡ್ ಪಡೆಯಲಾಗಿದೆ. ಕಂಬಗಳನ್ನು ನಿಗದಿಪಡಿಸಿದ ತಾಂತ್ರಿಕ ಗುಣಮಟ್ಟಕ್ಕೆ ಅನುಗುಣವಾಗಿ ಅಳವಡಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದ್ದು, ಏಜೆನ್ಸಿಯವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಕಾಮಗಾರಿಯಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಕೆಪಿಟಿಸಿಎಲ್ ಮತ್ತು ಮೆಸ್ಕಾಂನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details