ಶಿವಮೊಗ್ಗ:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ವೈಯಕ್ತಿಕ ತೇಜೋವಧೆ ಮಾಡುವುದರಿಂದ ಅವರಿಗೆ ಏನೂ ಲಾಭವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್ ಕೊಟ್ಟರು. ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಎತ್ತಿದ್ದಾರೆ. ಈ ಬಗ್ಗೆ ನಮ್ಮ ತಕರಾರಿಲ್ಲ ಎಂದರು. ಮೈಸೂರು ಆಯುಕ್ತರು ಮತ್ತು ಡಿಜಿಯವರಿಗೆ ಸ್ಯಾಂಟ್ರೋ ರವಿಯನ್ನು ಕರೆತಂದು ಆತನನ್ನು ಸಂಪೂರ್ಣ ವಿಚಾರಣೆ ನಡೆಸಲು ಹೇಳಿದ್ದೇನೆ. ಆತನ ಹಿನ್ನಲೆ ಏನು? ಎಷ್ಟು ಕೇಸ್ ಇದೆ? ಯಾರನ್ನೆಲ್ಲಾ ಬ್ಲಾಕ್ ಮೇಲ್ ಮಾಡಿಕೊಂಡು ಓಡಾಡುತ್ತಿದ್ದಾನೆ ಎಲ್ಲವನ್ನೂ ವಿಚಾರಣೆಗೊಳಪಡಿಸಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ. ಸ್ಯಾಂಟ್ರೋ ರವಿ ನನ್ನ ಜೊತೆ ಬಂದಿರಬಹುದು, ಯಾರು ಬೇಕಾದರೂ ನನ್ನ ಮನೆಗೆ ಬರುತ್ತಾರೆ. ಬೇಡಿಕೆ ಇಡುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದವರು, ಸಾವಿರಾರು ಜನರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಯಾರಿಗೂ ಪೊಲೀಸ್ ಸರ್ಟಿಫಿಕೇಟ್ ಇಟ್ಟುಕೊಂಡು ಬನ್ನಿ ಎಂದಿದ್ದನ್ನು ನೋಡಿಲ್ಲ ಎಂದರು.
ಇನ್ನು ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು, ಕುಮಾರಸ್ವಾಮಿ ಸತ್ಯಕ್ಕೆ ದೂರವಾದ ಆಪಾದನೆ ಮಾಡಿದ್ದಾರೆ. ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಿಂದ ಅವರಿಗೆ ಯಾವರೀತಿ ಲಾಭವಾಗುತ್ತದೆ ಗೊತ್ತಿಲ್ಲ. ಗೃಹ ಸಚಿವನಾದ ನನ್ನನ್ನು, ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ, ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎಂದು ಹೇಳಿದರು.