ಶಿವಮೊಗ್ಗ : ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಾಗೂ ಅವರ ಸಂಬಂಧಿಕರಿಗೆ ಅನುಕೂಲವಾಗಲೆಂದು ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶ್ರೀಧರ್ ಎಂಬುವರು ಹೊಸ ಸಿಸ್ಟಮ್ವೊಂದನ್ನು ಜಾರಿಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಡ್ಯೂಯಲ್ ಮೈಕ್ ಸಿಸ್ಟಮ್ ಎಂಬ ಸಾಧನ ಜಾರಿಗೊಳಿಸಿದ್ದಾರೆ. ಇದು ರಾಜ್ಯದ ಪ್ರಥಮ ಪ್ರಯತ್ನ ಎನ್ನಲಾಗಿದೆ. ಕೋವಿಡ್ ವಾರ್ಡ್ ಹಾಗೂ ವೈದ್ಯರು ಮತ್ತು ಸೋಂಕಿತರಿಗೆ ಸಂಪರ್ಕಕ್ಕಾಗಿ ಈ ಸಿಸ್ಟಮ್ ಉಪಯೋಗಿಸಬಹುದು.
ಡ್ಯೂಯಲ್ ಮೈಕ್ ಸಿಸ್ಟಮ್ ಮೂಲಕ ಮಾತನಾಡುತ್ತಿರುವ ಡಾ.ಶ್ರೀಧರ್ ಡ್ಯೂಯಲ್ ಮೈಕ್ ಸಿಸ್ಟಮ್ ಅಂದರೇನು?: ಮೆಗ್ಗಾನ್ ಕೋವಿಡ್ ಆಸ್ಪತ್ರೆಯ ಎಲ್ಲಾ ವಾರ್ಡ್ ಸೇರಿದಂತೆ ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾದ ಮೂಲಕ ಎಲ್ಲ ಕಡೆ ನಿಗಾವಹಿಸಬಹುದಾಗಿದೆ. ಈ ಕ್ಯಾಮೆರಾದಿಂದಲೇ ಡ್ಯೂಯಲ್ ಮೈಕ್ ಸಿಸ್ಟಮ್ ಅಳವಡಿಸಲಾಗಿದೆ. ಒಂದು ಮೈಕ್ ಡಾ.ಶ್ರೀಧರ್ ಅವರ ಕಚೇರಿಯಲ್ಲಿದೆ. ಇನ್ನೂಂದು ಮೈಕ್ ಐಸಿಯು ವಾರ್ಡ್ನಲ್ಲಿ ಅಳವಡಿಸಲಾಗಿದೆ. ಇದರಿಂದ ಆಸ್ಪತ್ರೆ ಕರ್ತವ್ಯ ನಿರತ ವೈದ್ಯರಿಗೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು, ಸೋಂಕಿತರ ಆರೋಗ್ಯ ವಿಚಾರಣೆ ಸೇರಿ ಎಲ್ಲವನ್ನೂ ಮಾಡಬಹುದಾಗಿದೆ.
ಈ ಸಂಪರ್ಕದಲ್ಲಿ ಸೋಂಕಿತರ ಆರೋಗ್ಯ ವಿಚಾರಿಸುವುದು ಹಾಗೂ ಕರ್ತವ್ಯ ನಿರತ ಸಿಬ್ಬಂದಿಗೆ ಚಿಕಿತ್ಸಾ ಕ್ರಮ ಸೂಚಿಸಲು ಬಳಸಲಾಗುತ್ತಿದೆ. ಡ್ಯೂಯಲ್ ಮೈಕ್‌ನಿಂದ ಪ್ರತಿಯೊಬ್ಬ ಸೋಂಕಿತರ ಆರೋಗ್ಯ ವಿಚಾರಿಸಬಹುದಾಗಿದೆ. ಎಂಎಸ್ ಅವರು ಸೇರಿದಂತೆ ಹಿರಿಯ ವೈದ್ಯರು ಇಲ್ಲಿನ ಮೈಕ್‌ನಿಂದ ವಾರ್ಡ್ಗೆ ಮಾತನಾಡಬಹುದು. ವಾರ್ಡ್ನಲ್ಲಿರುವವರಿಗೆ ಕೇಳಲು ಒಂದು ಸ್ಪೀಕರ್ ಇಡಲಾಗಿದೆ.
ಅದೇ ರೀತಿ ಎಂಎಸ್ ರೂಂನಲ್ಲಿ ಹಾಗೂ ಆಸ್ಪತ್ರೆ ಹೊರಗಡೆ ಸ್ಪೀಕರ್ ಇಡಲಾಗಿದೆ. ಹಿರಿಯ ವೈದ್ಯಾಧಿಕಾರಿಗಳು ಮೈಕ್ನಲ್ಲಿ ಮಾತನಾಡುವಾಗ ಒಳಗೆ ಹಾಗೂ ಹೊರಗೆ ಇರುವವರಿಗೆಲ್ಲ ಆದೇಶ ತಿಳಿಯಲೆಂದು ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಎಲ್ಲರು ಅಲರ್ಟ್ ಆಗಿ ಕೆಲಸ ಮಾಡುತ್ತಾರೆ ಎಂಬ ಉದ್ದೇಶದಿಂದ ಇದನ್ನು ಅಳವಡಿಸಲಾಗಿದೆ. ಅಲ್ಲದೆ, ಸಂಬಂಧಿಕರು ಸೋಂಕಿತರೂಂದಿಗೆ ನೇರವಾಗಿ ಮಾತನಾಡಬಹುದು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಒಂಟಿತನ, ಭಯ ಕಾಡುವುದಿಲ್ಲ. ನಮ್ಮವರು ಇದೇ ಆಸ್ಪತ್ರೆಯಲ್ಲಿ ಇದ್ದಾರೆ ಎಂಬ ಧೈರ್ಯದಲ್ಲಿ ಸೋಂಕಿತರು ಸಹ ಇರುತ್ತಾರೆ ಎನ್ನುತ್ತಾರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶ್ರೀಧರ್.
ರಾಜ್ಯಕ್ಕೆ ಮಾದರಿಯಾದ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 300 ಬೆಡ್ಗಳ ಸೌಲಭ್ಯವಿದೆ. ಇದರಲ್ಲಿ 30 ಐಸಿಯು ಬೆಡ್ ಇವೆ. 130 ಆಕ್ಸಿಜನ್ ಬೆಡ್ಗಳಿವೆ. 25-30 ವೆಂಟಿಲೇಟರ್ ಬೆಡ್ಗಳಿವೆ. ರೋಗಿಗಳಿಗೆ ತಮ್ಮವರ ಆರೋಗ್ಯದ ಬಗ್ಗೆ ತಿಳಿಯಲು ಹೆಲ್ಪ್ ಡೆಸ್ಕ್ ರಚನೆ ಮಾಡಲಾಗಿದೆ. ಇದಕ್ಕಾಗಿ 08102-269888 ನಂಬರ್ ಇಡಲಾಗಿದ್ದು, ಇದನ್ನು ನಿರ್ವಹಿಸಲು ಒಬ್ಬರನ್ನು ನೇಮಿಸಲಾಗಿದೆ. ಇಲ್ಲಿ ಬಂದು ಅಥವಾ ಮನೆಯಿಂದಲೇ ಸೋಂಕಿತರ ಬಗ್ಗೆ ಮಾಹಿತಿ ಪಡೆಯಬಹುದು.
ಇಲ್ಲವೇ, ಆಸ್ಪತ್ರೆಗೆ ಬಂದು ತಮ್ಮವರ ಸ್ಥಿತಿಗತಿ ತಿಳಿಯಬಹುದಾಗಿದೆ. ಈ ಡ್ಯೂಯಲ್ ಮೈಕ್ ಸಿಸ್ಟಮ್ ವೈದ್ಯರು ವೈದ್ಯರ ನಡುವೆ ಮಾತ್ರವಲ್ಲದೆ, ಸೋಂಕಿತರು ಹಾಗೂ ಅವರ ಸಂಬಂಧಿಕರ ನಡುವೆಯೂ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ರಾಜ್ಯಕ್ಕೆ ಮಾದರಿ ವ್ಯವಸ್ಥೆ ಎನ್ನಬಹುದು.