ಶಿವಮೊಗ್ಗ:ಈ ವರ್ಷದ ಪ್ರಥಮ ಮೆಗಾ ಲೋಕ ಅದಾಲತ್ ಮಾರ್ಚ್ 27ರಂದು ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ನಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 7,551 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಹಿಂದೂ ವಾರಸಾ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, ವಿಭಜನಾ ಪ್ರಕರಣಗಳು ಹಾಗೂ ಇನ್ನಿತರ ಪ್ರಕರಣಗಳನ್ನು ಗುರುತಿಸಿ, ಉಭಯ ಕಕ್ಷಿದಾರರನ್ನು ಕರೆಯಿಸಿ ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಇದಲ್ಲದೆ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ಇತರ ಯಾವುದೇ ನ್ಯಾಯಾಲಯಕ್ಕೆ ಬರಬಹುದಾದ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಲಾಗುವುದು. ಈ ಪ್ರಕರಣಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಲಾಗುವುದು. ಇಂತಹ ಅವಾರ್ಡ್‍ಗಳನ್ನು ಸಂಬಂಧಿಸಿದ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಮತ್ತು ಅವರ ಸಮಯ ಉಳಿಯಲಿದೆ ಎಂದರು.