ಶಿವಮೊಗ್ಗ: ಮನೆಗೆ ಹೊರಟಿದ್ದ ವ್ಯಕ್ತಿಯ ಮೇಲೆ ಬೈಕ್ನಲ್ಲಿ ಬಂದಿದ್ದ ಮೂವರು ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಭರ್ಮಪ್ಪ ನಗರದಲ್ಲಿ ನಡೆದಿದೆ. ಭರ್ಮಪ್ಪ ನಗರದ ನಿವಾಸಿ ಪ್ರಕಾಶ್(30) ಎಂಬಾತನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕಾಶ್ ಭರ್ಮಪ್ಪ ನಗರದ ನಿವಾಸಿಯಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಸ್ ಸ್ಟಾಂಡ್ ಹೋಗಿ ವಾಪಸ್ ಆಟೋದಲ್ಲಿ ಬಂದಿದ್ದಾರೆ. ಸ್ನೇಹಿತರು ಪ್ರಕಾಶ್ನನ್ನು ಬಿಟ್ಟು ವಾಪಸ್ ಹೋಗುತ್ತಿದ್ದಂತಯೇ ಬೈಕ್ನಲ್ಲಿ ಬಂದ ಮೂವರು ಏಕಾಏಕಿ ಪ್ರಕಾಶ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಪ್ರಕಾಶ್ರವರ ತಲೆ, ಮುಖ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದೆ. ಇದೇ ವೇಳೆ, ತಕ್ಷಣ ಕೆಳಗೆ ಬಿದ್ದ ಪ್ರಕಾಶ್ನನ್ನು ಮೂವರು ಕಾಲಿನಲ್ಲಿ ತುಳಿದು ಹಾಕಿದ್ದಾರೆ. ಅವರಿಂದ ತಪ್ಪಿಸಿಕೊಂಡ ಪ್ರಕಾಶ್ ಮನೆಗೆ ಓಡಿದ್ದಾನೆ. ಮನೆಯವರು ಪ್ರಕಾಶನ ಕೂಗಾಟ ಕೇಳಿ ಬಾಗಿಲು ತೆಗೆದು ನೋಡಿ ತಕ್ಷಣ ಒಳಗೆ ಕರೆದು ಕೊಂಡಿದ್ದಾರೆ. ಅಷ್ಟರಲ್ಲಿ ಬೈಕ್ನಲ್ಲಿ ಬಂದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.