ಶಿವಮೊಗ್ಗ: ತುಂಗೆಯ ಮಡಿಲಿನ ಪ್ರಸಿದ್ದ ಪಕ್ಷಿಧಾಮ ಮಂಡಗದ್ದೆಯ ಪಕ್ಷಿಧಾಮ. ಶಿವಮೊಗ್ಗ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 169(A)ಯಲ್ಲಿರುವ ಈ ಪಕ್ಷಿಧಾಮ ತುಂಗಾ ನದಿಯ ಮಧ್ಯದಲ್ಲಿದೆ.
ಈ ಪಕ್ಷಿಧಾಮ ಒಂದು ಕಾಲದಲ್ಲಿ ಸಹಸ್ರಾರು ವಿದೇಶಿ ಪಕ್ಷಿಗಳ ಆವಾಸ ಸ್ಥಾನವಾಗಿತ್ತು. ತುಂಗಾ ನದಿಯ ಮಧ್ಯದಲ್ಲಿನ ಮರಗಳೇ ಪಕ್ಷಿಗಳಿಗೆ ಆಸರೆಯಾಗಿತ್ತು. ಇಂತಹ ಪಕ್ಷಿಧಾಮ ಈಗ ಅವನತಿಯತ್ತ ಸಾಗಿದೆ.
ಮಂಡಗದ್ದೆ ಪಕ್ಷಿಧಾಮದ ಪ್ರತ್ಯಕ್ಷ ವರದಿ ನದಿ ಮಧ್ಯೆ ಇದ್ದ ಮರಗಳೇ ಆಸರೆ:
ತುಂಗಾ ನದಿ ಮಧ್ಯದಲ್ಲಿ ಇರುವ ಮರಗಳಿಂದ ಇಲ್ಲಿ ಒಂದು ಕಾಲದಲ್ಲಿ ನಡುಗಡ್ಡೆಯ ರೀತಿ ಜಾಗವಿತ್ತು. ಇಲ್ಲಿ ಹೊಳೆಲಕ್ಕಿ ಎಂಬ ಮರಗಳು ಹೇರಳವಾಗಿದ್ದವು. ಈ ಮರದಲ್ಲಿ ದೇಶ - ವಿದೇಶಗಳಿಂದ ಬಂದ ಹಕ್ಕಿಗಳು ಬಂದು ಸುಮಾರು 6 ತಿಂಗಳ ಕಾಲ ಇಲ್ಲಿ ವಾಸ ಮಾಡಿ, ತಮ್ಮ ವಂಶಾಭಿವೃದ್ದಿಯನ್ನು ಮಾಡಿಕೊಂಡು ವಾಪಸಾಗುತ್ತಿದ್ದವು. ಇಲ್ಲಿಗೆ ಚೀನಾ, ಕಾಶ್ಮಿರ, ನೇಪಾಳ ಹಾಗೂ ಅಫ್ಘಾನಿಸ್ತಾನದಿಂದಲೂ ಸಹ ವಿವಿಧ ಜಾತಿಯ ಪಕ್ಷಿಗಳು ಆಗಮಿಸಿ, ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ವಾಪಸ್ಸಾಗುತ್ತಿದ್ದವು.
ತುಂಗಾ ಮೇಲ್ದಂಡೆ ಯೋಜನೆಯಿಂದ ಈ ಭಾಗದಲ್ಲಿ ನೀರು ಹೆಚ್ಚಾಗಿ ನಿಲ್ಲಲು ಪ್ರಾರಂಭವಾಯ್ತು. ಇದರಿಂದ ಮರಗಳು ಬಿದ್ದು ಹೋಗಲು ಪ್ರಾರಂಭಿಸಿವೆ. ಇಲ್ಲಿಗೆ ಬರುವ ಪಕ್ಷಿಗಳು ಸುರಕ್ಷತೆಯ ಕೊರತೆಯಿಂದ ಬೇರೆ ಬೇರೆ ಕಡೆ ತಮ್ಮ ಆವಾಸವನ್ನು ಬದಲಾಯಿಸಿಕೊಂಡಿವೆ.
ಸರ್ಕಾರ ಸಹ ಮಂಡಗದ್ದೆ ಪಕ್ಷಿಧಾಮವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಇಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿ ನಡೆಯದೆ ಇರುವುದರಿಂದ ಜನ ಮಂಡಗದ್ದೆ ಪಕ್ಷಿಧಾಮದತ್ತ ಸುಳಿಯುತ್ತಿಲ್ಲ. ಈ ಕುರಿತು ಛಾಯಾಗ್ರಾಹಕರು ಸಾಕಷ್ಟು ಬೇಸರ ಹೊರಹಾಕಿದ್ದು, ಶಿವಮೊಗ್ಗ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.