ಶಿವಮೊಗ್ಗ :ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರಗಳು ಒಂದೆರಡಲ್ಲ. ಅವುಗಳಿಂದ ಆಗುವ ಅವಾಂತರಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರು ಪ್ರತಿದಿನ ಹಿಡಿ ಶಾಪ ಹಾಕುವಂತಾಗಿದೆ. ಈಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ದಿವ್ಯಾಂಗರೊಬ್ಬರು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದು, ನೋವಿನಿಂದ ಸಂಕಟ ಪಡುತ್ತಿದ್ದಾರೆ.
ಇಮಾಮ್ ಸಾಬ್ ಇನಾಂದಾರ್ (38) ಎಂಬುವ ದಿವ್ಯಾಂಗ ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಹೇಗಾಯ್ತು ಘಟನೆ?
ಇಮಾಮ್ ಸಾಬ್ ಇನಾಂದಾರ್ ಅವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನವರು. ಇವರಿಗೆ ಹುಟ್ಟಿನಿಂದ ಅಂಧತ್ವ ಇದೆ. ಕಳೆದ ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ 2ನೇ ಡಿವಿಜನ್ ಅಸಿಸ್ಟೆಂಟ್ ಆಗಿ ಇವರು ಕೆಲಸ ಮಾಡುತ್ತಿದ್ದಾರೆ.
ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಮುಸ್ಲಿಂ ಹಾಸ್ಟೆಲ್ನಲ್ಲಿ ಇವರು ವಾಸವಾಗಿದ್ದಾರೆ. ಐದು ವರ್ಷದಿಂದ ಕುವೆಂಪು ರಂಗಮಂದಿರದ ಮುಂಭಾಗದ ರಸ್ತೆಯ ಮೂಲಕ ಇವರು ನ್ಯಾಯಾಲಯಕ್ಕೆ ತೆರಳುತ್ತಿದ್ದರು.
ಗುರುವಾರ ಮಧ್ಯಾಹ್ನ ಊಟಕ್ಕೆಂದು ಇಮಾಮ್ ಸಾಬ್ ಇನಾಂದಾರ್ ಅವರು ಶಿವಮೊಗ್ಗ ನ್ಯಾಯಾಲಯದಿಂದ ಹಾಸ್ಟೆಲ್ಗೆ ತೆರಳುತ್ತಿದ್ದರು. ಪ್ರತಿದಿನದ ಹಾಗೆ ರಾಷ್ಟ್ರೀಯ ಕಾನೂನು ಕಾಲೇಜು ಮುಂಭಾಗದ ರಸ್ತೆಯಲ್ಲಿ ಅವರು ನಡೆದು ಬರುತ್ತಿದ್ದರು. ಆದರೆ, ಆ ರಸ್ತೆಯಲ್ಲಿ ಹೊಸತೊಂದು ಗುಂಡಿ ತೆಗೆದಿರುವುದು ಇಮಾಮ್ ಸಾಬ್ ಇನಾಂದಾರ್ ಅವರ ಗಮನಕ್ಕೆ ಬಂದಿರಲಿಲ್ಲ.
ಪ್ರತಿದಿನ ಓಡಾಡುವ ರಸ್ತೆ ಅದು. ಹಾಗಾಗಿ, ಅವರಿಗೆ ಹೊಸದಾಗಿ ಗುಂಡಿ ತೆಗೆದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಗುಂಡಿ ತೆಗೆದ ನಂತರ ಅಲ್ಲಿ ಯಾವುದೇ ಬ್ಯಾರಿಕೇಡ್ಗಳನ್ನು ಸಹ ಇಟ್ಟಿಲ್ಲ. ಹಾಗಾಗಿ, ನೇರವಾಗಿ ಗುಂಡಿಯೊಳಗೆ ಬಿದ್ದು ತೊಡೆ ಭಾಗಕ್ಕೆ ಪೆಟ್ಟಾಗಿದೆ.