ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಆನೆ ಮೇಲಿಂದ ಕೆಳಗೆ ಬಿದ್ದ ಮಾವುತ.. ವಿಡಿಯೋ ವೈರಲ್ - ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ಘಟನೆ

ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಲ್ಲಿರುವ ಆನೆಯ ಮೇಲಿಂದ ಕೆಳಗೆ ಬಿದ್ದು ಮಾವುತ ಗಾಯಗೊಂಡಿರುವ ಘಟನೆ ನಡೆದಿದೆ.

Etv man-fell-from-elephant-in-sakrebail-shivamogga
ಶಿವಮೊಗ್ಗ: ಆನೆ ಮೇಲಿಂದ ಕೆಳಗೆ ಬಿದ್ದ ಮಾವುತ.. ವಿಡಿಯೋ ವೈರಲ್

By ETV Bharat Karnataka Team

Published : Dec 2, 2023, 4:45 PM IST

Updated : Dec 2, 2023, 6:13 PM IST

ಶಿವಮೊಗ್ಗ: ಆನೆ ಮೇಲಿಂದ ಕೆಳಗೆ ಬಿದ್ದ ಮಾವುತ.. ವಿಡಿಯೋ ವೈರಲ್

ಶಿವಮೊಗ್ಗ: ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದಾದ ತಾಲೂಕಿನ ಸಕ್ರೆಬೈಲು ಆನೆ‌ ಬಿಡಾರದ ಕುಂತಿ ಆನೆ ಮೇಲಿಂದ ಮಾವುತ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಶಂಶುದ್ದೀನ್ ಆನೆ ಮೇಲಿಂದ ಬಿದ್ದು ಗಾಯಗೊಂಡ ಮಾವುತ. ಮೇಲಿಂದ ಬಿದ್ದ ರಭಸಕ್ಕೆ ಶಂಶುದ್ದೀನ್​ನ ಕೈ ಮೂಳೆ ಮುರಿತವಾಗಿದ್ದು, ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆನೆ ಮೇಲಿಂದ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕುಂತಿ ಆನೆ ಓಡುತ್ತ ಬಂದಿದ್ದು, ಈ ವೇಳೆ ಕುಂತಿಯ ಮರಿ ಧ್ರುವ ಏಕಾಏಕಿ ತಾಯಿ ಬಳಿ ಓಡಿ ಬಂದಿದೆ. ತಕ್ಷಣ ಕುಂತಿ ಆನೆ ತಿರುಗಿ ನಿಂತಿದೆ. ಈ ವೇಳೆ, ಆನೆ ಮೇಲಿದ್ದ ಮಾವುತ ಶಂಶುದ್ದೀನ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣ ಅಲ್ಲಿಯೇ ಇದ್ದ ಇತರ ಮಾವುತರು ಶಂಶುದ್ದೀನ್​ನನ್ನು ಮೇಲಕ್ಕೆ ಎತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆದಿಲ್ಲ ಎಂದ ಅಧಿಕಾರಿ: ಮತ್ತೊಂದೆಡೆ, ಸಕ್ರೆಬೈಲು ಆನೆ‌ ಬಿಡಾರದಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆದ ವೇಳೆ ಈ ಅವಘಡ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪ ತಳ್ಳಿಹಾಕಿದ್ದಾರೆ. ಈ ಕುರಿತು ವನ್ಯಜೀವಿ ವಿಭಾಗದ ಡಿಎಫ್​​​​ಒ ಪ್ರಸನ್ನ ಪಟಗಾರ್ ಈ‌ಟಿವಿ‌ ಭಾರತ್​ಗೆ ಪ್ರತಿಕ್ರಿಯಿಸಿ, ''ಸಕ್ರೆಬೈಲು ಆನೆ ಬಿಡಾರದಲ್ಲಿ ಯಾವುದೇ ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆದಿಲ್ಲ. ನಾವು ಕ್ಯಾಂಪ್ ಒಳಗೆ ಅನುಮತಿ ಪಡೆದ ಫೋಟೊ, ಕ್ಯಾಮೆರಾ ಹಾಗೂ ವಿಡಿಯೋ ಕ್ಯಾಮೆರಾಗಳಿಗೆ ಅವಕಾಶ ನೀಡುತ್ತೇವೆ. ಅಲ್ಲಿ ಯಾವುದೇ ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆದಿಲ್ಲ'' ಎಂದು ಹೇಳಿದ್ದಾರೆ.

''ಆನೆಯು ತನ್ನ ಮರಿ ಜೊತೆ ಬರುವಾಗ ಮರಿ ಮೂತ್ರ ವಿಸರ್ಜನೆಗೆ ನಿಂತಿದೆ. ಈ ವೇಳೆ ತಾಯಿ ಆನೆ ಸ್ವಲ್ಪ ಮುಂದೆ ಹೋಗಿದೆ. ಮೂತ್ರ ವಿಸರ್ಜನೆ ಮಾಡಿದ ನಂತರ ಮರಿ ಮತ್ತೆ ತಾಯಿ ಬಳಿ ಓಡಿ ಬಂದಿದೆ. ಇದರಿಂದ ಗಾಬರಿಗೊಂಡ ತಾಯಿ ಆನೆ ಒಮ್ಮೆಲೇ ತಿರುಗಿದೆ. ಈ ವೇಳೆ ಆನೆ ಮೇಲಿದ್ದ ಮಾವುತ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಮಾವುತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ಡಿಎಫ್​​​​ಒ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.

ಸಕ್ರೆಬೈಲು ಆನೆ ಬಿಡಾರವು ವನ್ಯಜೀವಿ ಧಾಮವಾಗಿದೆ. ಇಲ್ಲಿಗೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.

ಇದನ್ನೂ ಓದಿ :ಸಕ್ರೆಬೈಲ್​ ಬಿಡಾರದ ವೈದ್ಯರ ಮೇಲೆ ದಾಳಿ ಮಾಡಿದ್ದ ಒಂಟಿ ಸಲಗ ಸೆರೆ

Last Updated : Dec 2, 2023, 6:13 PM IST

ABOUT THE AUTHOR

...view details