ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ವೃತ್ತದಲ್ಲಿ 18 ವರ್ಷಗಳಿಂದ ಇದ್ದ ಗಾಂಧಿ ಪ್ರತಿಮೆಯನ್ನು ನಿನ್ನೆ (ಸೋಮವಾರ) ತಡರಾತ್ರಿ 2 ಗಂಟೆಯ ಸುಮಾರಿಗೆ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ದುಷ್ಕೃತ್ಯ ಎಸಗಿದವರನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಪೊಲೀಸ್ ವರಿಷ್ಟಧಿಕಾರಿ ಮಿಥುನ್ ಕುಮಾರ್ ಜಿ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ತಡೆದು ವೃತ್ತದ ಬಳಿ ಗಾಂಧಿ ಫೋಟೋ ಇಟ್ಟು ಪ್ರತಿಭಟಿಸಿದ ಜನರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
"ರಾಷ್ಟಪಿತ ಮಹಾತ್ಮ ಗಾಂಧಿಜೀ ಪ್ರತಿಮೆ ಧ್ವಂಸ ಮಾಡಿರುವುದನ್ನು ಖಂಡಿಸುತ್ತೇನೆ. ನಮ್ಮ ದೇಶದ ಅಪ್ರತಿಮ ಹೋರಾಟಗಾರರು ಹಾಗೂ ಅಹಿಂಸಾವಾದಿಗಳ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಖಂಡನೀಯ. ಜಿಲ್ಲಾಧಿಕಾರಿಗಳ ಜೊತೆ ಬೇರೆ ಮೂರ್ತಿ ನಿರ್ಮಾಣದ ಬಗ್ಗೆ ಮಾತನಾಡುತ್ತೇನೆ" ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ. ಇದೇ ವೇಳೆ ಆದಷ್ಟು ಬೇಗ ಅಪರಾಧಿಗಳನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ತಿಳಿಸಿದರು.
ಹೊಳೆಹೊನ್ನೂರು ಪಟ್ಟಣಕ್ಕೆ ಪೊಲೀಸ್ ವರಿಷ್ಟಧಿಕಾರಿ ಮಿಥುನ್ ಕುಮಾರ್ ಜಿ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಭೇಟಿ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ಭರವಸೆ ನೀಡಿದ ನಂತರ ಜನರು ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ.
ಗಾಂಧಿ ಪ್ರತಿಮೆ ಧ್ವಂಸ ಪ್ರಕರಣದ ಕುರಿತು ಎಸ್ಪಿ ಮಾಹಿತಿ
ನಂತರ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, "ಹೊಳೆಹೊನ್ನೂರಿನ ಮುಖ್ಯ ವೃತ್ತದಲ್ಲಿ ಕಳೆದ 18 ವರ್ಷಗಳ ಹಿಂದೆ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ನಿನ್ನೆ ರಾತ್ರಿ ಇಬ್ಬರು ಕಿಡಿಗೇಡಿಗಳು ಬಂದು ಹಾನಿ ಮಾಡಿದ್ದಾರೆ. ತಕ್ಷಣ ನಮ್ಮ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಿಸಿಕೊಂಡಿದ್ದೆವೆ. ಪ್ರಕರಣ ಸಂಬಂಧ ಎರಡು ಟೀಂಗಳನ್ನು ರಚಿಸಲಾಗಿದೆ. ಅದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಪ್ರಕರಣ ಸಂಬಂಧಪಟ್ಟಂತೆ ಕೆಲ ಸಾಕ್ಷಿಗಳು ಲಭ್ಯವಾಗಿವೆ. ಪ್ರಕರಣ ತನಿಖೆಯಲ್ಲಿ ಇರುವುದರಿಂದ ಈಗಲೇ ಏನೂ ಹೇಳಲಾಗದು. ಪ್ರತಿಭಟನೆ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸದ್ಯ ಪಟ್ಟಣ ಶಾಂತಿಯುತವಾಗಿದೆ" ಎಂದರು.
ಇದನ್ನೂ ಓದಿ:ಶಿವಮೊಗ್ಗ: ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು - ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ