ಶಿವಮೊಗ್ಗ: ನಾನು ಸಿಗಂದೂರಿನ ಚೌಡಮ್ಮ ದೇವಿಗೆ ಬರಗಾಲ ನೀಡಬೇಡಮ್ಮ ಎಂದು ಕೇಳಿಕೊಳ್ಳಲು ಬಂದಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಾಗರ ತಾಲೂಕು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕೆ ಕುಟುಂಬಸಮೇತರಾಗಿ ನವರಾತ್ರಿ ಪೂಜೆಗೆ ಆಗಮಿಸಿ, ದೇವಿ ಚೌಡಮ್ಮನ ದರ್ಶನ ಪಡೆದು, ವಿಶೇಷ ಪೂಜೆ ನಡೆಸಿ, ಹೋಮದಲ್ಲಿ ಭಾಗಿಯಾಗಿದರು.
ನಂತರ ಮಾತನಾಡಿದ ಅವರು, ನಾನು ಶ್ರೀ ಕ್ಷೇತ್ರಕ್ಕೆ ನವರಾತ್ರಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಬರಗಾಲ ಕೊಡಬೇಡಮ್ಮ ಎಂದು ಪ್ರಾರ್ಥಿಸಿದ್ದೇನೆ ಎಂದರು. ಬೆಳಕು ನೀಡುವ ಕ್ಷೇತ್ರದಲ್ಲಿ ಹೆಚ್ಚಿಗೆ ಮಳೆಯಾಗುವಂತೆ ಮಾಡಿದರೆ, ಇನ್ನೂ ಹೆಚ್ಚು ಬೆಳಕು ನೀಡುವಂತಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡು ತಾಯಿ ಎಂದು ಬೇಡಿಕೊಂಡಿದ್ದೇನೆ ಎಂದರು. ಕಳಸವಳ್ಳಿ ಹಾಗೂ ಹೊಳೆಬಾಗಿಲಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಕೂಡ ವೀಕ್ಷಿಸಿದ್ದೇನೆ. ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್ಗಳ ಬಳಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ನಾಡಹಬ್ಬ ದಸರಾ ಆಚರಣೆಗೆ ಸರ್ಕಾರದ ಅನುದಾನ ಕೊರತೆ ವಿಚಾರವಾಗಿ ಮಾತನಾಡಿ, ದಸರಾ ಆಚರಣೆಗೆ ನಾವೇ ದುಡ್ಡು ಹಾಕಿಕೊಂಡು ಈ ಬಾರಿ ಆಚರಣೆ ಮಾಡಬೇಕಿದೆ. ಬರಗಾಲ ಇರುವಾಗ ದುಡ್ಡು ಹೊಂದಿಸುವುದು ಕಷ್ಟವಾಗುತ್ತದೆ. ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ಹೇಳಿದ್ದಾರೆ. ದುಡ್ಡು ಖರ್ಚು ಮಾಡಿಯೇ ಹಬ್ಬ ಆಚರಿಸಬೇಕೆಂದೇನಿಲ್ಲ, ನಮ್ಮ ಹೃದಯದಿಂದಲೂ ಹಬ್ಬ ಆಚರಣೆ ಮಾಡುವಂತಾಗಬೇಕು ಎಂದರು.