ಶಿವಮೊಗ್ಗ:ಇಂದು ನನ್ನ ಹುಟ್ಟುಹಬ್ಬ, ಇಂದಿನಿಂದಲೇ ನನ್ನ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ ಎನ್ನುವ ಮೂಲಕ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ತಮ್ಮ ರಾಜಕೀಯ ಬದಲಾವಣೆಯ ಸುಳಿವು ನೀಡಿದ್ದಾರೆ.
ಇಂದು ನಗರದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ನಾನು ಸುಮಾರು ಒಂದೂವರೆ ವರ್ಷಗಳಿಂದ ರಾಜಕೀಯದಿಂದ ದೂರವಿದ್ದೆ. ಆದರೆ ರಾಜಕಾರಣಿಯಾಗಿ ಮುಂದುವರೆಯಬೇಕಾಗುತ್ತದೆ ಎಂದರು.
ಈಗ ನನ್ನ ತಂದೆ ಇಲ್ಲ. ಅವರ ಸ್ಥಾನದಲ್ಲಿ ಅವರ ಅಭಿಮಾನಿಗಳು ಹಾಗೂ ವಿವಿಧ ಪಕ್ಷದ ಹಿರಿಯರ ಜೊತೆ ಚರ್ಚೆ ನಡೆಸಿ, ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಬದಲಾವಣೆ ಯಾವ ರೀತಿ ಆಗುತ್ತದೆ ಎಂದು ನಾನು ನಂತರ ತಿಳಿಸುತ್ತೇನೆ ಎಂದರು.
ನಾನು ಸುಮ್ಮನೆ ಕೂರಲು ಆಗಲ್ಲ. ಇಂದು ನನ್ನ ಹುಟ್ಟುಹಬ್ಬ, ನಾನು ಹೆಚ್ಚು ಸುಳ್ಳು ಹೇಳಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ನನ್ಮ ರಾಜಕೀಯ ಬದಲಾವಣೆಯಿಂದ ಅನುಕೂಲವಾಗುತ್ತದೆ. ನನಗೆ ಎಲ್ಲಾ ಪಕ್ಷದಲ್ಲೂ ಸಹ ಸ್ನೇಹಿತರಿದ್ದಾರೆ. ಇದರಿಂದ ನನಗೆ ಯಾವ ಪಕ್ಷದದಲ್ಲೂ ವಿರೋಧಿಗಳೇ ಇಲ್ಲ ಎಂದು ಮಾಜಿ ಶಾಸಕ ಹೇಳಿದರು.