ಶಿವಮೊಗ್ಗ : ನಮ್ಮ ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ ರೂ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಇದರಲ್ಲಿ ನಮ್ಮ ಪಾಲು ನಮಗೆ ನೀಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬರದ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ರಾಜ್ಯಕ್ಕೆ ಬರಕ್ಕಾಗಿ ಕೇಂದ್ರದಿಂದ ಯಾವುದೇ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ರಾಜ್ಯದಿಂದ 17 ಸಾವಿರ ಕೋಟಿ ರೂಗಳನ್ನ ಬರ ನಿರ್ವಹಣೆಗಾಗಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೆವು. ಈಗ ಸಿಎಂ ಸಿದ್ದರಾಮಯ್ಯ ತುರ್ತಾಗಿ ರಾಜ್ಯದ ರೈತರಿಗೆ 2. ಸಾವಿರ ರೂ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ 16 ಜಿಲ್ಲೆಗಳಲ್ಲಿ ಬರ ಇದೆ. ಇದರಿಂದ ಕೇಂದ್ರ ಸರ್ಕಾರ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು
ಪಂಚರಾಜ್ಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪರ ಬಂದಿರುವುದು ಒಂದೇ ಒಂದು ರಾಜ್ಯ, ಉಳಿದವುಗಳಲ್ಲಿ ಕಾಂಗ್ರೆಸ್ ಪರ ಇದೆ. ಚುನಾವಣಾ ಫಲಿತಾಂಶ ಬಂದಾಗ ನೋಡೋಣ ಎಂದು ಸಚಿವರು ಹೇಳಿದರು. ನಮ್ಮ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೆ ನಾವೇ ಹಣ ನೀಡಿದ್ದೆವು ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರ ಅಧ್ಯಯನ ನಡೆಸಿದರೆ, ಹೋಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿ ತರಲಿ, ಈಗ ಸಿಎಂ 2 ಸಾವಿರ ರೂ ನೀಡುತ್ತಿರುವುದು ಸಹ ನಮ್ಮ ರಾಜ್ಯದ ಹಣವೇ. ಮೊದಲ ಹಂತದಲ್ಲಿ ಈಗ ಹಣ ನೀಡುತ್ತಿದ್ದಾರೆ. ಮೊದಲು ಬಿಜೆಪಿಯವರು ಬರದ ಅನುದಾನ ಬಿಡುಗಡೆ ಮಾಡಿಸಲಿ ಎಂದು ವಾಗ್ದಾಳಿ ನಡೆಸಿದರು.