ಕರ್ನಾಟಕ

karnataka

ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ಪಾರುಪತ್ಯ: ಗತವೈಭವ ಮೆರೆಯುತ್ತಾ ಕಾಂಗ್ರೆಸ್​?

By

Published : Apr 18, 2023, 5:37 PM IST

Updated : Apr 18, 2023, 11:13 PM IST

ಮಧ್ಯ ಕರ್ನಾಟಕ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ಬಿಜೆಪಿ ಹಿಡಿತ ಹೊಂದಿದೆ. ಬಿಜೆಪಿ ಶಾಸಕರೇ ಇಲ್ಲಿ ಹೆಚ್ಚಿದ್ದಾರೆ. ಈ ಬಾರಿಯ ಚುನಾವಣೆ ಯಾರಿಗೆ ವರದಾನವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರ
ರಾಜ್ಯ ವಿಧಾನಸಭೆ ಚುನಾವಣೆ

ನಾಗರಾಜ್ ನೇರಿಗೆ

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಅಧಿಸೂಚನೆ ಹೊರಬಿದ್ದಿದ್ದು, ರಾಜಕೀಯ ಪಕ್ಷಗಳು ಪ್ರಚಾರ ಭರಾಟೆ ಜೋರಾಗಿಯೇ ಆರಂಭಿಸಿವೆ. ರಾಜಕೀಯ ಪಕ್ಷಗಳು ರಾಜ್ಯದ ವಿವಿಧ ಭಾಗಗಳನ್ನು ವಿಂಗಡಣೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ ಹೀಗೆ ನಾಲ್ಕು ಭಾಗಗಳಾಗಿ ಮಾಡಿಕೊಂಡಿವೆ. ಮಧ್ಯ ಕರ್ನಾಟಕ ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗ, ಬೆಣ್ಣೆ ನಗರಿ ದಾವಣಗೆರೆ ಹಾಗೂ ಕೋಟೆ ನಾಡು ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡಿದೆ. ಮಧ್ಯ ಕರ್ನಾಟಕದಲ್ಲಿ ಬಿಜೆಪಿ 2013 ರಿಂದ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಈ ಭಾಗದಲ್ಲಿ ಗಟ್ಟಿಯಾಗಿದ್ದರೂ, ಹಿಡಿತ ಕಳೆದುಕೊಳ್ಳುತ್ತಿದೆ.

ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ:ಶಿವಮೊಗ್ಗ ಜಿಲ್ಲೆ ಕಳೆದ 4 ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಮೊದಲು ಸೋಷಿಯಲಿಸ್ಟ್ ಪಾರ್ಟಿ ನಂತರ ಕಾಂಗ್ರೆಸ್ ಈಗ ಬಿಜೆಪಿ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಜಿಲ್ಲೆಯು ಬಿಜೆಪಿಯ ಶಕ್ತಿ ಕೇಂದ್ರವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರು ಜಿಲ್ಲೆಯವರಾಗಿದ್ದಾರೆ. ರಾಜ್ಯದ ಆರ್​ಎಸ್​ಎಸ್​ನ ಪ್ರಮುಖರೂ ಜಿಲ್ಲೆಯವಾಗಿರುವುದು ಪಕ್ಷಕ್ಕೆ ತಳಪಾಯ ಹಾಕಿಕೊಟ್ಟಿದೆ.

ಜಿಲ್ಲೆ 7 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು, ಶಿವಮೊಗ್ಗ ವಿಧಾಸನಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಉಳಿದಂತೆ ಶಿವಮೊಗ್ಗ ನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ ಹಾಗೂ ಭದ್ರಾವತಿ ಕ್ಷೇತ್ರಗಳನ್ನು ಒಳಗೊಂಡಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ 1983 ರಿಂದ 2018ರ ತನಕ ನಡೆದ ಚುನಾವಣೆಯಲ್ಲಿ 1999 ರಲ್ಲಿ ಒಮ್ಮೆ ಮಾತ್ರ ಸೋಲು ಅನುಭವಿಸಿದ್ದಾರೆ. ಉಳಿದಂತೆ ಅಜೇಯವಾಗಿ ಮುನ್ನುಗ್ಗಿದ್ದಾರೆ. 4 ಬಾರಿ ಅವರು ಸಿಎಂ ಆಗಿರುವುದು ಕ್ಷೇತ್ರದ ವಿಶೇಷವಾಗಿದೆ.

ಉಳಿದಂತೆ ಕೆ.ಎಸ್.ಈಶ್ಬರಪ್ಪ ಬಿಜೆಪಿಯ ಧುರೀಣರು. 2 ಸಲ ಸೋತರೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಹಿರಿದಾಗಿದೆ. ಉಳಿದಂತೆ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಅವರು 1983 ರಿಂದ ಸ್ಪರ್ಧಿಸಿದ್ದು, ಮೂರು ಬಾರಿ ಸೋಲು ಅನುಭವಿಸಿದ್ದಾರೆ. ಉಳಿದಂತೆ 4 ಭಾರಿ ಗೆಲುವು ಸಾಧಿಸಿದ್ದಾರೆ. ಸಾಗರದ ಹಾಲಿ ಶಾಸಕ ಹಾಲಪ್ಪ ಹರತಾಳು ಅವರು ಸೊರಬದಲ್ಲಿ ಎರಡು ಬಾರಿ ಶಾಸಕರಾಗಿದ್ದರೆ, ಸಾಗರದಿಂದ ಒಮ್ಮೆ ಆಯ್ಕೆಯಾಗಿದ್ದರು. ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸೊರಬದ ಶಾಸಕ ಕುಮಾರ್​ ಬಂಗಾರಪ್ಪ ಅವರು ಹಿಂದೆ 3 ಸಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕೆಲಸ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರ

ಭದ್ರಾವತಿಯಲ್ಲಿ ಇದುವರೆಗೂ ಕಮಲ ಅರಳಿಲ್ಲ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಆಡಳಿತದ ಹಿಡಿತವಿದೆ. ಈ ಬಾರಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣಾ ತಂತ್ರ ರೂಪಿಸುತ್ತಿದೆ.

ಇಲ್ಲಿ ಅಭಿವೃದ್ಧಿಯೇ ಆಧಾರ:ಶಿಕಾರಿಪುರ ತಾಲೂಕಿನಲ್ಲಿ ಯಡಿಯೂರಪ್ಪನವರು, ತಮ್ಮ ಕ್ಷೇತ್ರವನ್ನು ಯಾವುದೇ ಜಿಲ್ಲಾ ಕೇಂದ್ರಕ್ಕೆ ಕಡಿಮೆ ಇಲ್ಲದಂತೆ ಅಭಿವೃದ್ದಿ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಆಡಕೆ ಸಂಶೋಧನಾ ಕೇಂದ್ರ, ತುಂಗಾ ನದಿಗೆ ಎರಡು ಸೇತುವೆ ಶರಾವತಿ ಉಗಮ ಸ್ಥಾನದ ಅಭಿವೃದ್ದಿ ಹೀಗೆ ಹಲವು ಯೋಜನೆಗಳಿವೆ. ಸಾಗರದಲ್ಲಿ ಶರಾವತಿ ನದಿ ಹಿನ್ನೀರಿಗೆ ಬೃಹತ್ ಸೇತುವೆ ನಿರ್ಮಾಣ, ಜೋಗ ಜಲಪಾತದ ಅಭಿವೃದ್ದಿ, ಸೊರಬದಲ್ಲಿ ಏತ ನೀರಾವರಿ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯವನ್ನು ತಲುಪಿಸಲಾಗಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಏತ ನೀರಾವರಿ ಯೋಜನೆ ಸೇರಿದಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದ ಅಭಿವೃದ್ದಿ ನಡೆದಿದೆ. ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇರುವ ಎರಡು ಕಾರ್ಖಾನೆಗಳಾದ ಮೈಸೂರು ಪೇಪರ್ ಮಿಲ್, ಸಕ್ಕರೆ ಕಾರ್ಖಾನೆ ಹಾಗೂ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯೇ ಚುನಾವಣೆಯ ಪ್ರಮುಖ ಅಂಶವಾಗಿದೆ. ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರಿದ್ದಾರೆ.

ಬೆಣ್ಣೆ ನಗರಿ ದಾವಣಗೆರೆ:ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳಾಗಿವೆ. ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಬೇರ್ಪಡಿಸಲಾಯಿತು. ಜಿಲ್ಲೆಗೆ ಶಿವಮೊಗ್ಗದ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕು ಹಾಗೂ ಬಳ್ಳಾರಿಯಿಂದ ಹರಪನಹಳ್ಳಿ ಸೇರಿಸಿ ಜಿಲ್ಲೆಯನ್ನಾಗಿ ರೂಪಿಸಲಾಯಿತು. ಜಿಲ್ಲೆಯು ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. ಆದರೆ, ಕಳೆದ‌ ಮೂರು ಚುನಾವಣೆಯಿಂದ ಇಲ್ಲಿ ಕೇಸರಿ ಬಾವುಟ ಹಾರಾಟ ಜೋರಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ

ಜಿಲ್ಲೆಯಲ್ಲಿ ಮಯಾಕೊಂಡ ಎಸ್​ಸಿ ಮೀಸಲು ಕ್ಷೇತ್ರ, ಜಗಳೂರು ಎಸ್​ಟಿ ಮೀಸಲು, ಉಳಿದಂತೆ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಹರಿಹರ, ಹೊನ್ನಾಳಿ, ಚನ್ನಗಿರಿ ಸಾಮಾನ್ಯ ಕ್ಷೇತ್ರವಾಗಿವೆ. ಜಿಲ್ಲೆಯ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಹರಿಹರದಲ್ಲಿ ರಾಮಪ್ಪ ಕಾಂಗ್ರೆಸ್​ ಶಾಸಕರಾಗಿದ್ದರೆ, ಉಳಿದ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಜಿಲ್ಲೆಯಲ್ಲಿ ಚನ್ನಗಿರಿ ಹಾಗೂ ಹೊನ್ನಾಳಿ, ದಾವಣಗೆರೆ ಹಾಗೂ ಹರಿಹರದ ಕೆಲ ಭಾಗಗಳು ನೀರಾವರಿಯನ್ನು ಒಳಗೊಂಡಿವೆ. ಆದರೆ, ಬರದ ತಾಲೂಕುಗಳಾದ ಮಾಯಕೊಂಡ ಹಾಗೂ ಜಗಳೂರುಗಳಿಗೂ ಏತನೀರಾವರಿ ಯೋಜನೆಯ ಮೂಲಕ ಕೆರೆ ತುಂಬಿಸುವ ಕಾರ್ಯ ಮಾಡಲಾಗಿದೆ. ಜಗಳೂರು ಭಾಗಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ನೇರ ಲಾಭ ದೊರಕುತ್ತಿದೆ. ಅಭಿವೃದ್ದಿ ಯೋಜನೆಗಳಿಂದ ಬಿಜೆಪಿ ಚುನಾವಣೆ ಎದುರಿಸಲು ಸಿದ್ದವಾಗಿದೆ. ಜಿಲ್ಲೆಯಲ್ಲಿ 14,27,796 ಮತದಾರರಿದ್ದಾರೆ.

ಕೋಟೆ ನಾಡು ಚಿತ್ರದುರ್ಗ:ಕಾಂಗ್ರೆಸ್​ ಹಿಡಿತದಲ್ಲಿರುವ ಜಿಲ್ಲೆಯನ್ನು ಬಿಜೆಪಿ ನಿಧಾನವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಸಾಮಾನ್ಯ ಕ್ಷೇತ್ರಗಳಾದರೆ, ಹೊಸದುರ್ಗ ಹಾಗೂ ಹೊಳಲ್ಕೆರೆ ಎಸ್​ಸಿಗೆ ಮೀಸಲಿದೆ. ಮೊಳಕಾಲ್ಮೂರು ಎಸ್​​ಟಿ ಮೀಸಲು ಕ್ಷೇತ್ರವಾಗಿದೆ. 6 ಕ್ಷೇತ್ರಗಳಲ್ಲಿ‌ ಬಿಜೆಪಿ 5 ರಲ್ಲಿ ಜಯಭೇರಿ ಬಾರಿಸಿದೆ. ಈ ಬಾರಿ ಆರೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಸಂಸದ ಸ್ಥಾನವು ಸಹ ಬಿಜೆಪಿ ಹೊಂದಿದೆ. ಉಳಿದಂತೆ ಕಾಂಗ್ರೆಸ್ ಎಲ್ಲ ಕ್ಷೇತ್ರದಲ್ಲೂ ಅಭ್ಯರ್ಥಿ ಕಣಕ್ಕೆ ಇಳಿಸಿ ಜಿಲ್ಲೆಯಲ್ಲಿ ತನ್ನ ಗತವೈಭ ಸ್ಥಾಪಿಸಲು ಮುಂದಾಗಿದೆ.

ಜಿಲ್ಲೆಯ ಜಿಲ್ಲೆಯ ವೈಶಿಷ್ಟ್ಯ

ಜಿಲ್ಲೆಯಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟನ್ನು ಹೊರತುಪಡಿಸಿ ಯಾವುದೇ ಅಣೆಕಟ್ಟೆಗಳಿಲ್ಲ.‌ ಅಲ್ಲದೇ, 3 ದಶಕದ ನಂತರ ತುಂಬಿರುವುದು ವಿಶೇಷ. ಜಿಲ್ಲೆಗೆ ಸ್ವಾತಂತ್ರ ಬಂದಾಗಿನಿಂದ ಯಾವುದೇ ದೊಡ್ಡ ಯೋಜನೆಗಳೂ ಜಿಲ್ಲೆಗೆ ಬಂದಿಲ್ಲ. ಜಿಲ್ಲೆಯ ಜನತೆ ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಳ್ಳುವಂತಾಗಿದೆ. ಜಿಲ್ಲೆಗೆ ದೂರ ದೃಷ್ಟಿಯ ಯೋಜನೆಗಳಿಲ್ಲದೇ ಇರುವುದು ಅಭಿವೃದ್ದಿಯಲ್ಲಿ ಹಿಂದೆ ಬೀಳಲು ಕಾರಣವಾಗಿದೆ. ಈ ಬಾರಿಯ ಚುನಾವಣೆ ಅಭಿವೃದ್ದಿ ಆಧಾರದ ಮೇಲೆ ನಡೆಯಲಿದೆ.‌ ಜಿಲ್ಲೆಯಲ್ಲಿ ಒಟ್ಟು 13,51,865 ಮತದಾರರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ:ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಹಾಗೂ ಬಯಲು ಸೀಮೆ ಎರಡೂ ಪ್ರದೇಶವನ್ನು ಹೊಂದಿರುವುದು ವಿಶೇಷ. ತರಿಕೆರೆ ಹಾಗೂ ಕಡೂರು ಬಯಲು ಸೀಮೆ ಪ್ರದೇಶಗಳು, ಉಳಿದ ಚಿಕ್ಕಮಗಳೂರು, ಶೃಂಗೇರಿ ಹಾಗೂ ಮೂಡಿಗೆರೆ ಅಪ್ಪಟ ಹಸಿರ ಮಲೆನಾಡು ತಾಲೂಕುಗಳು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಚಿಕ್ಕಮಗಳೂರು, ತರಿಕೆರೆ, ಕಡೂರು, ಶೃಂಗೇರಿ ಹಾಗೂ ಮೂಡಿಗೆರೆ. ಮೂಡಿಗೆರೆ ಮೀಸಲು ಕ್ಷೇತ್ರವಾದರೆ, ಉಳಿದ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳೇ ಆಗಿವೆ.

ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು

ಪ್ರವಾಸೋದ್ಯಮವೇ ಜೀವಾಳ:ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಇದರಲ್ಲಿ ಧಾರ್ಮಿಕ ಕೇಂದ್ರಗಳಾದ ಶೃಂಗೇರಿ, ಹೊರನಾಡು ಒಳಗೊಂಡಿದೆ. ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ ಬೆಟ್ಟ ಸೇರಿ ಅನೇಕ ಪ್ರವಾಸಿತಾಣಗಳಿವೆ. ಇಲ್ಲಿನ ಕಾಫಿ ಬೆಳೆಯ ಜೊತೆ ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.‌

ಜಿಲ್ಲೆಯಲ್ಲಿ ತರೀಕೆರೆ ಹೋಬಳಿ ಹೊರತುಪಡಿಸಿ ಉಳಿದ ತಾಲೂಕುಗಳಿಗೆ ಇನ್ನೂ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಾವರಿ ಸೌಲಭ್ಯ ಕಲ್ಪಿಸುವ ಚಿಂತನೆಯನ್ನು ಸರ್ಕಾರಗಳು ಮಾಡಿಲ್ಲ. ಜಿಲ್ಲಾ ಕೇಂದ್ರ ಸೇರಿದಂತೆ ಇತರ ಕಡೆ ಹೆಲಿಪ್ಯಾಡ್ ನಿರ್ಮಾಣ ಬೇಕಿದೆ. ಕೈಗಾರಿಕಾ ವಸಾಹತು ನಿರ್ಮಾಣವಾಗಬೇಕಿದೆ. ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. 5 ನದಿಗಳು ಉಗಮವಾದರೂ ಪ್ರಯೋಜನವಿಲ್ಲ. ಕಾರಣ ಇಲ್ಲಿ ಒಂದು ಅಣೆಕಟ್ಟೆಯೂ ಇಲ್ಲ.

ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು

ರಾಜಕೀಯ ಹಿನ್ನೆಲೆ:ಚಿಕ್ಕಮಗಳೂರು ಜಿಲ್ಲೆ ದೇಶದ ಉಕ್ಕಿನ ಮಹಿಳೆ ಎಂದೇ ಖ್ಯಾತಿಯಾದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ. 2004 ರಿಂದ ಜಿಲ್ಲೆಯು ಭಾರತೀಯ ಜನತಾ ಪಾರ್ಟಿ ಪಾರುಪತ್ಯವನ್ನು ಹೊಂದಿದೆ. ಶೃಂಗೇರಿಯಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸುತ್ತದೆ ಎಂಬ ಭಾವನೆ ಇದೆ.

ಪತ್ರಕರ್ತ ನಾಗರಾಜ ನೇರಿಗೆ ಹೇಳುವುದು ಹೀಗೆ: ಕಳೆದ ಎರಡು ಚುನಾವಣೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿಸಿದೆ. ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರೇ ನಿರ್ಣಯಕ. ಕಳೆದ ಬಾರಿ ಈ ಸಮುದಾಯ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆಂದು ಅವರಿಗೆ ಬೆಂಬಲ ಸೂಚಿಸಿತ್ತು. ಈ ಭಾರಿ ಯಡಿಯೂರಪ್ಪನವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ಈ ಸಮುದಾಯ ಬಿಜೆಪಿಗೆ ಬೆಂಬಲ ನೀಡದೆ ಇರಬಹುದು. ಶಿವಮೊಗ್ಗ ಜಿಲ್ಲೆ ಈಶ್ವರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರು ಇಲ್ಲಿದೇ ಚುನಾವಣೆ ಎದುರಿಸುತ್ತಿದೆ. ಇದು ಈ ಭಾರಿಯ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕಾದು‌ನೋಡಬೇಕಿದೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಪ್ರಭಾವ ಇನ್ನೂ ಇದೆ. ಚಿತ್ರದುರ್ಗದಲ್ಲೂ ಸಹ ಇವರ ಪ್ರಭಾವ ಕೆಲಸ‌ ಮಾಡಬಹುದು. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮತಯಾಚನೆ ಮಾಡಿದರೆ ಮತ ಬರುತ್ತದೆ. ಅದೇ ರೀತಿ ಕಾಂಗ್ರೆಸ್ ತನ್ನ ವಿಚಾರಧಾರೆಗಳಿಂದ ಚುನಾವಣೆ ನಡೆಸಿದರೆ ಗೆಲುವು ಸಾಧಿಸಬಹುದಾಗಿದೆ. ಜೆಡಿಎಸ್ ಪಕ್ಷ ಕೂಡ ಹಿಂದೆ ಬಿದ್ದಿಲ್ಲ. ಹಾಗಾಗಿ ಮಧ್ಯ ಕರ್ನಾಟಕದಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದನ್ನು ಚುನಾವಣ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ‌ ಮೇಲೆ ನಿರ್ಧಾರಿತವಾಗುತ್ತದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ನಾಗರಾಜ ನೇರಿಗೆ.

ಓದಿ:ಡಿಕೆಶಿ ಕೋಟೆಯಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್: ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

Last Updated : Apr 18, 2023, 11:13 PM IST

ABOUT THE AUTHOR

...view details