ಶಿವಮೊಗ್ಗ : ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ಪುರಸಭೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ಪುರಸಭೆಯ ಎಫ್ಡಿಎ ಚಂದ್ರಕಲಾ ಲೋಕಾಯುಕ್ತ ಬಲೆಗೆ ಬಿದ್ದವರು. ಇಲ್ಲಿನ ಮಂಜುನಾಥ ಶೆಟ್ಟಿ ಎಂಬವರು ತಮ್ಮ ಖಾತೆ ಬದಲಾವಣೆಗಾಗಿ ಪುರಸಭೆಗೆ ಹೋದಾಗ ಸಿಬ್ಬಂದಿ ಖಾತೆ ಬದಲಾವಣೆ ಮಾಡಿಸದೆ ಸತಾಯಿಸಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮಂಜುನಾಥ್ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೊರಬ ಪುರಸಭೆಯಲ್ಲಿ ಚಂದ್ರಕಲಾ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿ ಉಮೇಶ್ ಈಶ್ವರ ನಾಯಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಚಾಮರಾಜನಗರದಲ್ಲಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ : ಇ- ಸ್ವತ್ತು ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ನಗರಸಭೆಯಲ್ಲಿ ನಡೆದಿದೆ. ನಗರಸಭೆಯ ಕಂದಾಯ ನಿರೀಕ್ಷಕ ನಾರಾಯಣ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ.
ಮಾದೇಶ್ ಎಂಬವರಿಗೆ ನಿವೇಶನದ ಇ-ಸ್ವತ್ತು ಮಾಡಿಕೊಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಇಂದು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.