ಶಿವಮೊಗ್ಗ: ಬಗರ್ ಹುಕುಂ ಭೂಮಿ ಖಾತೆ ವಿಷಯವಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಶಿವಮೊಗ್ಗ ತಾಲೂಕು ಹೊಳಲೂರು ಗ್ರಾಮದ ನಾಡ ಕಚೇರಿಯ ಉಪ ತಹಶೀಲ್ದಾರ್ ಪರಮೇಶ್ ನಾಯ್ಕ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಎರಡು ಎಕರೆ ಬಗರ್ ಹುಕುಂ ಭೂಮಿ ಖಾತೆಗೆ ಸೇರಿಸಲು ಶಿವರಾಜ್ ಎಂಬುವರಿಂದ 40 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಈಶ್ವರ ನಾಯಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಶಿವರಾಜ್ ಅಬ್ಬಲಗೆರೆ ನಿವಾಸಿಯಾಗಿದ್ದು, ಇವರು ಕ್ಯಾತನಕೊಪ್ಪ ಗ್ರಾಮದ ಬಳಿಯ ಎರಡು ಎಕರೆ ಬಗರ್ ಹುಕುಂ ಭೂಮಿ ಖಾತೆಗೆ ಸೇರಿಸುವಂತೆ ಬ್ರೋಕರ್ ಪ್ರಕಾಶ್ ಎಂಬುವರ ಮೂಲಕ ಉಪ ತಹಶೀಲ್ದಾರ್ರೊಂದಿಗೆ ಮಾತನಾಡಿದ್ದರು.
ಖಾತೆ ಮಾಡಿಕೊಡಲು 40 ಸಾವಿರ ರೂ. ನೀಡಬೇಕೆಂದು ಮಾತುಕತೆ ಆಗಿತ್ತು. ಇಂದು 30 ಸಾವಿರ ರೂ. ನೀಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಉಪ ತಹಶೀಲ್ದಾರ್ ಜೊತೆಗೆ ಬ್ರೋಕರ್ ಸಹ ಸಿಕ್ಕಿಬಿದ್ದಿದ್ದಾನೆ. ಹೊಳಲೂರು ನಾಡ ಕಚೇರಿಯಲ್ಲಿ ಈ ಹಿಂದೆ ಸಹ ಅಕ್ರಮವಾಗಿ ಬಗರ್ ಹುಕುಂ ಭೂಮಿಗೆ ಖಾತೆ ಮಾಡಿಸಿಡಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂ. ಹಣ ಪಡೆದುಕೊಂಡು ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದರು ಎಂಬ ಆರೋಪವಿತ್ತು.