ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆ ಶಿವಮೊಗ್ಗ ಕ್ಷೇತ್ರ ಮತ್ತೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಹಣಾಹಣಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಕಳೆದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ದಿವಂಗತ ಎಸ್.ಬಂಗಾರಪ್ಪನವರ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಈ ಬಾರಿ ಸಹ ಇವರಿಬ್ಬರೇ ಎದುರಾಳಿಗಳಾಗಿ ಸ್ಪರ್ಧೆ ಮಾಡಲಿದ್ದಾರೆ. ಮೈತ್ರಿ ಪಕ್ಷದಿಂದ ಮಧು ಬಂಗಾರಪ್ಪ ಅಭ್ಯರ್ಥಿ ಎಂದು ದೊಡ್ಡಗೌಡರು ಘೋಷಣೆ ಮಾಡಿದ್ದಾರೆ. ಇನ್ನು ಬಿ.ವೈ. ರಾಘವೇಂದ್ರ ಅವರ ಹೆಸರನ್ನ ಅಂತಿಮಗೊಳಿಸಿ ರಾಜ್ಯ ಸಮಿತಿಗೆ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಕಳುಹಿಸಿದೆ. ರಾಘವೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.
2008 ರಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ, ಬಂಗಾರಪ್ಪನವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಸಂಸತ್ ಪ್ರವೇಶ ಮಾಡಿದ್ದರು. ಕಳೆದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಹಾಗೂ ರಾಘವೇಂದ್ರ ಪರಸ್ಪರ ಸ್ಪರ್ಧೆ ಮಾಡಿದಾಗ ಮಧು ತಂದೆಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರಾ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿತ್ತು. ಆದರೆ, ಬಿಜೆಪಿಯ ಮುಂದೆ 52,148 ಮತಗಳಿಂದ ಸೋಲು ಕಂಡಿದ್ದರು. ಉಪ ಚುನಾವಣೆಯಲ್ಲಿ ಒಟ್ಟು 10 ಲಕ್ಷದ 21 ಸಾವಿರ ಮತ ಚಲಾವಣೆಯಾಗಿತ್ತು. ಅದರಲ್ಲಿ ರಾಘವೇಂದ್ರ 5,41,306 ಮತ ಪಡೆದುಕೊಂಡಿದ್ರೆ, ಮಧು ಬಂಗಾರಪ್ಪ 4,91,158 ಮತ ಗಳಿಸಿದ್ದರು.
ಶಿವಮೊಗ್ಗದಿಂದ ಚುನಾವಣಾ ಕಣಕ್ಕಿಳಿಯುತ್ತಿರುವ ಮಧು ಬಂಗಾರಪ್ಪ ಮತ್ತು ಬಿ.ವೈ ರಾಘವೇಂದ್ರ ಚುನಾವಣೆ ಘೋಷಣೆಗೊ ಮುಂಚೆಯೇ ಬಿಜೆಪಿ ಯುವಕರಿಗಾಗಿಯೇ ಕ್ರಿಕೆಟ್, ಕಬ್ಬಡ್ಡಿ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ತಿಳಿಸಿದ್ದಾರೆ.
ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಗೆಲ್ಲುವ ವಿಶ್ವಾಸದಲ್ಲಿದ್ದು, ಏಪ್ರಿಲ್ 3ರಂದು ನಾಮಪತ್ರಸಲ್ಲಿಸಲಿದ್ದಾರೆ. ಈ ವೇಳೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಡಿ.ಕೆ.ಶಿವಕುಮಾರ್ ಸಹ ಆಗಮಿಸಲಿದ್ದಾರೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 23 ರಂದು ಯಾರು ಸಂಸತ್ ಪ್ರವೇಶ ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.