ಶಿವಮೊಗ್ಗ:ಜಗದ್ವಿಖ್ಯಾತ ಜೋಗ ಜಲಪಾತಕ್ಕೆ ತೆರಳುವ ಮಾರ್ಗ ಹೊಂಡ ಗುಂಡಿಗಳಿಂದ ತುಂಬಿದ್ದು ಪ್ರವಾಸಿಗರ, ಜೊತೆಗೆ ಸ್ಥಳೀಯರು ಈ ರಸ್ತೆಯಲ್ಲಿ ಸಾಗಲು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಜೋಗಕ್ಕೆ ತೆರಳುವ ಸಾಗರ-ತಾಳಗುಪ್ಪ ನಡುವೆ ಗಾಳಿಪುರ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಗುಂಡಿಗಳಾಗಿವೆ. ಇವುಗಳಿಂದಾಗಿ ಜಾರಿ ಬಿದ್ದು ಹಲವು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಗುಂಡಿಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಪ್ರಯೋಜವಾಗಿಲ್ಲ. ಹಾಗಾಗಿ ಸ್ಥಳೀಯ ಯುವಕರು ಗುಂಡಿ ಮುಂದೆ ನಿಂತು ಡಿಫರೆಂಟ್ ಪ್ರತಿಭಟನೆ ಮಾಡಿದ್ದಾರೆ.
ಗುಂಡಿಗಳಲ್ಲಿ ದೊಡ್ಡ ಕಂಬ ನೆಟ್ಟು, ಅದಕ್ಕೆ ಅಲಂಕಾರ ಮಾಡಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಹೊಂಡಗಳಿಂದಾಗಿ ಪದೇ ಪದೇ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದರು ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಹಾಗಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಸ್ಥಳೀಯರು ವಿಭಿನ್ನ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಜೋಗ ಜಲಪಾತಕ್ಕೆ ತಲುಪಬಹುದಾಗಿದೆ. ಹಾಗಾಗಿ ಪ್ರತಿದಿನ ಸಾವಿರಾರು ಪ್ರವಾಸಿಗರು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಆದರೆ ರಸ್ತೆಯಲ್ಲಿರುವ ಗುಂಡಿಯಿಂದಾಗಿ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಯುವಕರು ಶ್ರಮದಾನ ಮಾಡಿ, ಗುಂಡಿಗಳಿಗೆ ಮಣ್ಣು ತುಂಬಿದ್ದರು. ಆದರೆ ಕೆಲವೇ ದಿನದಲ್ಲಿ ರಸ್ತೆ ಮತ್ತೆ ಗುಂಡಿ ಬೀಳುತ್ತಿದೆ. ಇದನ್ನು ಕೂಡಲೇ ಮುಚ್ಚಬೇಕು ಎಂದು ಯುವಕರು ಒತ್ತಾಯಿಸಿದ್ದಾರೆ.