ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ- ಕಾಂಗ್ರೆಸ್ ಸಮಬಲ, ಜೆಡಿಎಸ್ಗೆ 1 ಗೆಲುವು ಶಿವಮೊಗ್ಗ: ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದೆ. ಕಾಂಗ್ರೆಸ್ ಬಹುಮತದೊಂದಿಗೆ ವಿಜಯಶಾಲಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ನಡೆದು, ಎರಡು ಪಕ್ಷಗಳು ಸಮಾನಾಂತರವಾಗಿ ಸ್ಥಾನವನ್ನು ಹಂಚಿಕೊಂಡಿದೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ, ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಗಮೇಶ್ವರ, ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ, ಸಾಗರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮತ್ತು ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ. ವಿಜೇತರು ತಮ್ಮ ಗೆಲುವಿನ ಸಂತಸವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಸುಳ್ಳು, ಅಪಪ್ರಚಾರದಿಂದ ಹಿನ್ನಡೆ "5 ನೇ ಬಾರಿಗೆ ನನಗೆ ತೀರ್ಥಹಳ್ಳಿ ಕ್ಷೇತ್ರದ ಜನತೆ ಶಾಸನಸಭೆಗೆ ಹೋಗಲು ಆಶೀರ್ವಾದ ಮಾಡಿದ್ದಾರೆ. ನನ್ನ ಕಾರ್ಯಕರ್ತರ ಪಡೆ, ಹಾಗೂ ತೀರ್ಥಹಳ್ಳಿಯ ಮತದಾರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಗೆಲ್ಲಲು ಕ್ಷೇತ್ರದಲ್ಲಿ ಯಾವುದೇ ಕಷ್ಟವಿರಲಿಲ್ಲ. ಆದರೆ ನನ್ನನ್ನು ಸೋಲಿಸಲೆಂದೇ ಇಬ್ಬರು ಸನ್ನದ್ಧರಾಗಿದ್ದರು. ಆದರೆ ನನ್ನನ್ನು ಗೆಲ್ಲಿಸಲು ಜನರು ಒಂದಾದರು" ಎಂದು ತೀರ್ಥಹಳ್ಳಿ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದರು.
"ರಾಜ್ಯದಲ್ಲಿ ನಮಗೆ ಹಿನ್ನಡೆಯಾಗಿದೆ. ಸುಳ್ಳು ಅಪ್ರಚಾರಗಳು, ವಂಚನೆಯ ಕಾರ್ಡ್ಗಳು ನಮ್ಮ ಸೋಲಿಗೆ ಕಾರಣವಾಗಿದೆ. ನಾವು ಒಳ್ಳೆಯ ಆಡಳಿತ ಮಾಡಿ ಜನಪರ ಯೋಜನೆಗಳನ್ನು ರೂಪಿಸಿದ್ದೆವು. ಆದರೆ ಈ ಸಂದರ್ಭದಲ್ಲಿ ಕೊರತೆ ಉಂಟಾಯಿತು. ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಏನೂ ಮಾಡೋದಕ್ಕೂ ಆಗಲ್ಲ" ಎಂದರು.
"ಜನ ನಮ್ಮ ಸರ್ಕಾರ ವಿರುದ್ಧ ಇರಲಿಲ್ಲ. ಅಪಪ್ರಚಾರದಿಂದ ಸೋಲು ಉಂಟಾಗಿರಬಹುದು. ಇದು ಶಾಶ್ವತ ಹಿನ್ನಡೆ ಅಲ್ಲ. ಸಮೀಕ್ಷೆಗಳು ಹತ್ತಿರ ಹತ್ತಿರವಾಗಿದೆ. ನಾವು ವಿರೋಧ ಪಕ್ಷವಾಗಿ ಒಳ್ಳೆಯ ಆಡಳಿತ ನೀಡಲು ಪ್ರಯತ್ನ ಮಾಡುತ್ತೇವೆ. ಸದ್ಯಕ್ಕೆ ಯಾವ ಆಪರೇಷನ್ ಇಲ್ಲ. ಇಂದಿನಿಂದ ಆಟ ಶುರುವಾಗುತ್ತಿದೆ. ಇನ್ನು ರಾಜ್ಯ ಸಿಎಂ ಯಾರಾಗಬೇಕು? ಎಂಬ ಗುದ್ದಾಟ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮತದಾರ ದೇವರುಗಳಿಗೆ ಧನ್ಯವಾದ.. ಬಳಿಕ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಂಗಮೇಶ್ವರ ಮಾತನಾಡಿ, "ರಾಜ್ಯದ ಜನತೆ ಭ್ರಷ್ಟ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಬಹುಮತವನ್ನು ನೀಡಿದ್ದಾರೆ. ರಾಜ್ಯದ ಜನತೆಗೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿರವರಿಗೆ ಧನ್ಯವಾದಗಳು. ನಮ್ಮ ಕ್ಷೇತ್ರದ ಮತದಾರರು ನನಗೆ ಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ಮತದಾರ ದೇವರುಗಳಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದರು.
"ನಾನು ಮಾಡಿದ ಸೇವೆ, ಅಭಿವೃದ್ಧಿಯನ್ನು ನೋಡಿ ಜನ ನನ್ನ ಕೈ ಹಿಡಿದಿದ್ದಾರೆ. ಈ ಬಾರಿ ನಮ್ಮ ನಾಯಕರು ಗೆದ್ದು ಬಂದ್ರೆ ಮಂತ್ರಿ ಮಾಡುವುದಾಗಿ ಹೇಳಿದ್ದರು. ಅವರು ಹೇಳಿದಂತೆ ನಾನು ಮಂತ್ರಿಯಾದೆ. ನಾನು ಜನಪರ ಕೆಲಸಗಳನ್ನು ಮಾಡುತ್ತೇನೆ. ಸರ್ಕಾರಿ ಇಂಜಿನಿಯರ್ ಕಾಲೇಜು, ಸಣ್ಣ ಸಣ್ಣ ಕೈಗಾರಿಕೆ ತೆರೆದು ಯುವಕ ಯುವತಿಯರಿಗೆ ಉದ್ಯೋಗ ನೀಡಲಾಗುವುದು. ಇಡೀ ಜನತೆಯನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನೋಡಿಕೊಳ್ಳುತ್ತೇವೆ. ಯಾವುದೇ ಗಲಾಟೆ, ಗದ್ದಲವಿಲ್ಲದೆ ಆಡಳಿತ ನಡೆಸುತ್ತೇವೆ. 13 ಜನ ನಮ್ಮ ಎದುರಾಳಿಗಳೇ ಸಲಹೆ ನೀಡಿದ್ರೂ ಅದನ್ನು ತೆಗೆದುಕೊಂಡು ಆಡಳಿತ ನಡೆಸಲಾಗುವುದು" ಎಂದು ನುಡಿದರು.
ಗೆದ್ದು ಬಿಜೆಪಿ ವಾರಂಟಿ ತೋರಿಸಿದ್ದೇವೆ.. "ಬಹಳ ಸಂತೋಷವಾಗಿದೆ. ಸೊರಬ ಹಾಗೂ ಜಿಲ್ಲೆಯ ಜನತೆ ನಮಗೆ ಸತ್ಯಕ್ಕೆ ಜಯವಾಗಿದೆ ಎಂದು ತೋರಿಸಿದ್ದಾರೆ. ದೇಶದಲ್ಲಿ ಸತ್ಯ ಗೆಲ್ಲಬೇಕು, ಸುಳ್ಳು ಸೋಲಬೇಕು. ಅದು ದೇಶಕ್ಕೆ ಒಳ್ಳೆಯದಾಗುತ್ತದೆ. ಜನ ಒಳ್ಳೆಯ ತೀರ್ಮಾನ ನೀಡಿದ್ದಾರೆ. ಪ್ರಣಾಳಿಕೆಯನ್ನು ನೋಡಿ ಜನ ಆಶೀರ್ವಾದ ಮಾಡಿದ್ದಾರೆ. ನಿಮ್ಮ ಭವಿಷ್ಯ ಕಾಂಗ್ರೆಸ್ ಪಕ್ಷದ ಅಡಿಯಲ್ಲಿದೆ. ನಾವು ಖಂಡಿತವಾಗಿಯೂ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
"ಯಾರು ಸೋತಿದ್ದರೂ, ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ನಾವು ಸತ್ಯವನ್ನು ಇಟ್ಟುಕೊಂಡು ಹೋಗೋಣ, ಸುಳ್ಳನ್ನು ದೂರವಿಡೋಣ. ಬಂಗಾರದಂತಹ ಆಡಳಿತ ನೀಡೋಣ. ಕಾಂಗ್ರೆಸ್ಗೆ ವಾರಂಟಿ ಇಲ್ಲ ಅಂತ ಬಿಜೆಪಿಯವರು ಅಂದಿದ್ರು. ಈಗ ನಾವು ನಿಮ್ಮ ವಾರಂಟಿ ತೋರಿಸಿದ್ದೇವೆ. ನಿಮ್ಮ ಹಿಯಾಳಿಸಿ ಮಾತನಾಡಬೇಕು ಅಂತಿಲ್ಲ. ನೀವು ಚೆನ್ನಾಗಿ ನಡೆದುಕೊಳ್ಳಿ. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ" ಎಂದು ತಿಳಿಸಿದರು.
ಮೋದಿ ಬಂದ್ರೂ ನಾನೇ ಗೆದ್ದೆ.. "ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಮಾಡಿದ ಕೆಲಸದ ಪ್ರಯತ್ನ ನಮಗೆ ಗೆಲುವು ತಂದಿದೆ. ನಮ್ಮ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಸಿದ್ದರು. ಜನ ಅದೆಲ್ಲವನ್ನೂ ಲೆಕ್ಕಿಸದೇ ಮತ ನೀಡಿದ್ದಾರೆ. ಜನ ನನ್ನ ಸ್ವಭಾವದ ಬಗ್ಗೆ ತಿಳಿದು ನನಗ ಮತ ಹಾಕಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆ, ನಾನು 5 ವರ್ಷ ಮಾಡಿದ ಜನರ ಸೇವೆ, ಇದೆಲ್ಲವನ್ನು ನೋಡಿ ನನ್ನನ್ನು ಗೆಲ್ಲಿಸಿದ್ದಾರೆ. ಮೋದಿ ಅವರು ನನ್ನ ಕ್ಷೇತ್ರಕ್ಕೆ ಬಂದಿದ್ರು ಕೂಡ ನಾನೇ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವನ್ನು ನನ್ನ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ" ಎಂದು ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ವಿಜೇತ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಹೇಳಿದರು.
ಸಂಘಟನೆಯ ಪರಿಶ್ರಮದಿಂದ ಗೆಲುವು..: "ಶಿವಮೊಗ್ಗ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಮೇಲೆ ಹೇಗೆ ನಂಬಿಕೆ ವಿಶ್ವಾಸ ಇಟ್ಟು ಬಿಜೆಪಿಯನ್ನು ಗೆಲ್ಲಿಸಿದ್ದರೂ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಬಿಜೆಪಿ ಗೆಲುವು ಶಿವಮೊಗ್ಗದಲ್ಲಿ ಬಹಳ ಅಂತರದಲ್ಲಿಯೇ ಆಗಿದೆ. ಗೆಲುವಿನ ಅಂತರವನ್ನು ನಾವು ನಿರೀಕ್ಷೆ ಮಾಡಿದ್ದೆವು. ಸಂಘಟನೆಯ ಪರಿಶ್ರಮ ದಿಂದ ಗೆಲುವು ಸಾಧಿಸಿದ್ದೇವೆ. ಸೋಲಿನ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ" ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಚೆನ್ನಬಸಪ್ಪ ನುಡಿದರು.
ದುರಹಂಕಾರದ ವ್ಯಕ್ತಿಯನ್ನು ಸೋಲಿಸಿದ್ದಾರೆ.. "ಈ ಗೆಲುವವನ್ನು ನನ್ನ ಸಾಗರ ಹೊಸನಗರ ಕ್ಷೇತ್ರದ ಜನತೆಗೆ ನೀಡಿದ್ದೇನೆ. ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಅಹಂಕಾರ, ದುರಹಂಕಾರದ ವ್ಯಕ್ತಿಯನ್ನು ಸೋಲಿಸಿದ್ದಾರೆ. ಗೆದ್ದ ನಂತರ ಜನರ ಮೇಲೆ ದರ್ಪ ತೋರುತ್ತಿದ್ದ ವ್ಯಕ್ತಿಯನ್ನು ಸೋಲಿಸಿದ್ದಾರೆ. ಹಿಂದೆ ನನಗೆ ಟಿಕೆಟ್ ತಪ್ಪಿಸಿ ಇಲ್ಲಿ ಬಂದು ಗೆದ್ದು ನನ್ನನ್ನು ಸೋಲಿಸಿದ ವ್ಯಕ್ತಿಗೆ ಸಾಗರದ ಜನತೆ ಈ ಬಾರಿ ಬುದ್ಧಿ ಕಲಿಸಿದ್ದಾರೆ. ನಾನು 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿತ್ತು. ಸಾಗರ ಹೊಸನಗರ ಮಾದರಿ ಕ್ಷೇತ್ರವನ್ನಾಗಿಸುವ ಯೋಜನೆ, ರಸ್ತೆ, ಕುಡಿಯುವ ನೀರು, ಶಿಕ್ಷಣ ನೀಡುವ ಉದ್ದೇಶ ನನಗಿದೆ" ಎಂದು ಸಾಗರದ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇದನ್ನೂ ಓದಿ:ತೀರ್ಥಹಳ್ಳಿಯಲ್ಲಿ ಐದನೇ ಬಾರಿಗೆ ಗೆಲುವಿನ ನಗಾರಿ ಬಾರಿಸಿದ ಆರಗ ಜ್ಞಾನೇಂದ್ರ