ಶಿವಮೊಗ್ಗ:ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ರಾಜಕೀಯ ಪಕ್ಷಗಳು ರಾಜ್ಯದ ದೊಡ್ಡ ಸಮಾಜವಾದ ಲಿಂಗಾಯತರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಅದರಂತೆ ಸೋಮವಾರ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸದ ಬಳಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದರು.
ಈಗಾಗಲೇ ರಾಜ್ಯದಲ್ಲಿ ಲಿಂಗಾಯತರ ಪ್ರಾಬಲ್ಯವನ್ನು ಬಿಜೆಪಿಯಲ್ಲೇ ಉಳಿಸಿ, ಬೆಳೆಸಿಕೊಂಡು ಹೋಗುವ ಟಾಸ್ಕ್ ಪೂರೈಸುತ್ತಿರುವ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಲಿಂಗಾಯತ ಸಮಾಜದವರೊಂದಿಗೆ ಸ್ನೇಹಮಿಲನ ಕಾರ್ಯಕ್ರಮ ನಡೆಸಿದರು. ಅಸಮಾಧಾನಗೊಂಡಿರುವ ಲಿಂಗಾಯತರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೂ ಮುನ್ನ ಲಿಂಗಾಯತ ಸಮುದಾಯದ ಮುಖಂಡರ ಜತೆ ಸಭೆ ನಡೆಸಿರುವ ಯಡಿಯೂರಪ್ಪ ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಈ ಬಾರಿ ಲಿಂಗಾಯತ ಮತಗಳು ಯಾವ ಕಡೆ ಹೋಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಲಿಂಗಾಯತ ಸಮಾಜ ಒಗ್ಗೂಡಿಸಲು ಕರೆ:ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮೂರು ಪಕ್ಷಗಳಿಗೆ ಮತಗಳು ಹಂಚಿ ಹೋಗದಂತೆ ಗೇಮ್ ಪ್ಲಾನ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಭೆಯಲ್ಲಿ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಲಿಂಗಾಯತ ಸಮಾಜದ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪರನ್ನು ಗೆಲ್ಲಿಸಲು ಹಾಗೂ ಲಿಂಗಾಯತ ಸಮಾಜವನ್ನು ಒಗ್ಗೂಡಿಸಲು, ಲಿಂಗಾಯತ ಮತ ವಿಭಜನೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಕರೆ ನೀಡಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ "ಇದು ಮಾತನಾಡುವ ಸಮಯ ಅಲ್ಲ. ಚನ್ನಬಸಪ್ಪ ಅವರನ್ನು ಹೆಚ್ಚು ಅಂತರದಿಂದ ಗೆಲ್ಲಿಸಲು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಎಂದು ಕರೆ ನೀಡಿದರು. ಲಿಂಗಾಯತರ ಮತಗಳ ಬಗ್ಗೆ ಸುಮ್ಮನೆ ಗೊಂದಲ ಮೂಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಯೋಗ್ಯ, ಪ್ರಾಮಾಣಿಕ ವ್ಯಕ್ತಿ ಗೆಲುವಿನ ಬಗ್ಗೆ ಅನುಮಾನ ಇಲ್ಲ. ಗೆಲುವಿನ ಅಂತರ ಹೆಚ್ಚಾಗಬೇಕು. 15 ದಿವಸ ಕೆಲಸ ಮಾಡಿದರೆ 5 ವರ್ಷ ನೆಮ್ಮದಿಯಿಂದ ಇರಬಹುದು. ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಅಭ್ಯರ್ಥಿ ಅಲ್ಲ. ಯಡಿಯೂರಪ್ಪ ಅಭ್ಯರ್ಥಿ. ನೀವೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದರು.