ಶಿವಮೊಗ್ಗ : ವಿದ್ಯುತ್ ಪರಿವರ್ತಕದಲ್ಲಿ ದುರಸ್ತಿ ನಡೆಸುವ ಸಂದರ್ಭದಲ್ಲಿ ವಿದ್ಯುತ್ ಹರಿದು ಲೈನ್ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿರುವ ಘಟನೆ ಭದ್ರಾವತಿ ತಾಲೂಕು ಮಾಚೇನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ. ಕಿರಣ್(26) ಸಾವನ್ನಪ್ಪಿದ ಲೈನ್ಮ್ಯಾನ್.
ಈ ಮೊದಲೇ ಮೆಸ್ಕಾಂ ದುರಸ್ತಿ ಕಾಮಗಾರಿ ಬಗ್ಗೆ ಈ ಭಾಗದಲ್ಲಿ ಪ್ರಕಟಣೆ ನೀಡಿತ್ತು. ಅದರಂತೆ ಬೆಳಗ್ಗೆ 9 ಗಂಟೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಈ ಮಧ್ಯೆ ಇಂಡಸ್ಟ್ರಿಯಲ್ ಏರಿಯಾದ ಮೊದಲನೇ ತಿರುವಿನ ರಸ್ತೆಯಲ್ಲಿ ಇರುವ ಹೈಟೆನ್ಶನ್ ಕಂಬವನ್ನು ಮೆಸ್ಕಾಂ ಸಿಬ್ಬಂದಿ ಹತ್ತಿದ್ದಾರೆ. ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಕಿರಣ್ ಕಂಬದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುನಿಲ್ ಹಾಗೂ ಭಾಸ್ಕರ್ ಎಂಬವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.