ಶಿವಮೊಗ್ಗ:ಕೊರಮ, ಕೊರಚ, ಭೋವಿ, ಬಂಜಾರ ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿ ಮುಂದುವರೆಸುವಂತೆ ಸಿಎಂಗೆ ಒತ್ತಾಯಿಸಿ ಜೂನ್ 10 ರಂದು ರಾಜ್ಯಾದ್ಯಂತ ಏಕ ಕಾಲದಲ್ಲಿ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರಮ, ಕೊರಚ, ಭೋವಿ, ಬಂಜಾರ ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿಯೇ ಮುಂದುವರಿಸಬೇಕು ಯಾವುದೇ ಕಾರಣಕ್ಕೂ ಎಸ್ಸಿ ಪಟ್ಟಿಯಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.
ಮೂಲತಃ ಅಲೆಮಾರಿಗಳಾದ ಕೊರಮ, ಕೊರಚ, ಭೋವಿ, ಬಂಜಾರ ಸಮುದಾಯಗಳು ಇಂದಿಗೂ ಅಸ್ಪೃಶ್ಯತೆಯನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಅವಮಾನ ,ಅಸಮಾನತೆ ತಾರತಮ್ಯ ಹಾಗೂ ಸಾಮಾಜಿಕ ಕಳಂಕಕ್ಕೆ ಗುರಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ಅಲೆಮಾರಿ ಜಾತಿಗಳಾಗಿಯೇ ಉಳಿದಿದೆ ಹಾಗಾಗಿ ಯಾರ ಒತ್ತಡಕ್ಕೂ ಮಣಿಯದೆ ಎಸ್ಸಿ ಪಟ್ಟಿಯಲ್ಲಿಯೇ ಮುಂದುವರಿಸಬೇಕು ಎಂದರು.
ಇದಕ್ಕಾಗಿ 10ನೇ ತಾರೀಖಿನಂದು ರಾಜ್ಯಾದ್ಯಂತ ಪತ್ರ ಚಳುವಳಿ ಹಮ್ಮಿಕೊಂಡಿದ್ದು ಐವತ್ತು ಸಾವಿರಕ್ಕೂ ಹೆಚ್ಚು ಪತ್ರಗಳು ಅಂಚೆ ಮೂಲಕ ಮುಖ್ಯಮಂತ್ರಿ ಗಳಿಗೆ ಕಳಿಸಲಾಗುವುದು ಎಂದು ತಿಳಿಸಿದರು.