ಶಿವಮೊಗ್ಗ:ಆತ್ಮ ನಿರ್ಭರ ಭಾರತ ಯೋಜನೆಯಡಿ ನೀಡಲಾಗುತ್ತಿರುವ ಸಹಾಯಧನದ ಮೊತ್ತವನ್ನು ಹೆಚ್ಚಿಸುವಂತೆ ಹಾಗೂ ಎಲ್ಲರಿಗೂ ಯೋಜನೆಯನ್ನು ವಿಸ್ತರಿಸುವಂತೆ ಆಗ್ರಹಿಸಿ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಪತ್ರ ಚಳವಳಿ ಆರಂಭಿಸಿದ್ದಾರೆ.
ಲಾಕ್ಡೌನ್ ಕಾರಣದಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆತ್ಮ ನಿರ್ಭರ ಭಾರತ ಯೋಜನೆಯಡಿ ನೀಡುತ್ತಿರುವ 2 ಸಾವಿರ ರೂಪಾಯಿ ಹಣ ಎಲ್ಲಿಗೂ ಸಾಲುತ್ತಿಲ್ಲ. ಹಾಗಾಗಿ ಈ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಆತ್ಮ ನಿರ್ಭರ ಭಾರತ ಯೋಜನೆಯಿಂದ ಹಣ ಪಡೆಯಲು ಸಾಲ ತೆಗೆದುಕೊಂಡವರು ಮಾತ್ರ ಅರ್ಹರಾಗಿರುತ್ತಾರೆ. ಇದರಿಂದ ಯೋಜನೆ ಇತರ ಬೀದಿಬದಿ ವ್ಯಾಪಾರಿಗಳಿಗೆ ತಲುಪುತ್ತಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಕಾರ್ಡ್ ಹೊಂದಿರುವ ಎಲ್ಲರಿಗೂ ಸಹಾಯಧನ ನೀಡಬೇಕೆಂದು ಬೀದಿಬದಿ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಂಡಿದ್ದಾರೆ.