ಶಿವಮೊಗ್ಗ:ತಂಬಾಕು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವ ವ್ಯಾಪಾರಸ್ಥರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ, ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೋಟ್ಪಾ ಕಾಯ್ದೆಯನ್ವಯ ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಆದರೆ ಹಲವು ಅಂಗಡಿ ಮುಂಗಟ್ಟುಗಳ ಮುಂದೆ ತಂಬಾಕು ಉತ್ಪನ್ನಗಳ ಪರೋಕ್ಷ ಜಾಹೀರಾತು ಇರುವುದು ಕಂಡು ಬಂದಿದ್ದು, ಆರೋಗ್ಯ ಇಲಾಖೆ ಅಂತಹ ಅಂಗಡಿಗಳ ಪಟ್ಟಿಯನ್ನು ಮಾಡಿ ಪ್ರಕರಣ ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಅಂತಹ ಅಂಗಡಿಗಳ ಪರವಾನಿಗೆ ರದ್ದತಿಗೆ ಕೋರಿ ಸ್ಥಳೀಯ ಸಂಸ್ಥೆಗೆ ಶಿಫಾರಸು ಮಾಡಿ ಈ ಕುರಿತು ವರದಿಯನ್ನು ಸಲ್ಲಿಸುವಂತೆ ಅವರು ತಿಳಿಸಿದರು.