ಕರ್ನಾಟಕ

karnataka

ETV Bharat / state

ಇನ್ಮುಂದೆ ರಾಜ್ಯದಲ್ಲಿ ಮಹಿಳಾ ಡ್ರೈವರ್​ಗಳು: ಸ್ವಚ್ಛತಾ ಅಭಿಯಾನದಲ್ಲಿ ಸ್ತ್ರೀಯರದ್ದೇ ಪಾರುಪತ್ಯ - ಕೌಶಲ್ಯ ಕರ್ನಾಟಕ

ಮಹಿಳಾ ಸಬಲೀಕರಣ ಆಶಯವನ್ನು ಜಾರಿಗೆ ತರುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಬೃಹತ್ ಹೆಜ್ಜೆ ಇಟ್ಟಿದೆ. ಇನ್ಮುಂದೆ ಹಳ್ಳಿಗಳಲ್ಲಿ ಮಹಿಳೆಯರು ವಾಹನ ಚಲಾಯಿಸಿಕೊಂಡು ಬಂದು ನಿಮ್ಮ ಮನೆ ಕಸ ಪಡೆಯುತ್ತಾರೆ. ಬರೀ ವಾಹನ ಚಾಲನೆ ಅಷ್ಟೇ ಅಲ್ಲ. ಕಸ ಸಂಗ್ರಹಣೆ, ವಿಂಗಡಣೆ ಕೂಡ ಮಹಿಳೆಯರದ್ದೇ..

lady drivers works in Karnataka Grama Panchayats
ಇನ್ಮುಂದೆ ರಾಜ್ಯದಲ್ಲಿ ಮಹಿಳಾ ಡ್ರೈವರ್​ಗಳು: ಸ್ವಚ್ಛತಾ ಅಭಿಯಾನದಲ್ಲಿ ಸ್ತ್ರೀಯರದ್ದೇ ಪಾರುಪತ್ಯ

By

Published : Nov 3, 2021, 6:55 PM IST

ಶಿವಮೊಗ್ಗ:ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯತಿ ಮಟ್ಟದಲ್ಲಿ ಕಸ ಸಂಗ್ರಹಣೆ, ವಿಂಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಮೊದಲ ಹಂತದಲ್ಲಿ ಆಯ್ದ ಗ್ರಾಮ ಪಂಚಾಯತ್​ಗಳಲ್ಲಿ ಕಸ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಭಾಗದ ಕೆಲ ಗ್ರಾಪಂಗಳು ಈಗಾಗಲೇ ಕಸ ಸಂಗ್ರಹಣೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ಅದನ್ನೇ ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ.

‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್' ವತಿಯಿಂದ ಗ್ರಾಪಂ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದ್ದು ಹೊರಗುತ್ತಿಗೆ ಆಧಾರದ ಮೇಲೆ ಅದಕ್ಕೆ ಸಿಬ್ಬಂದಿ ನೇಮಕ, ತರಬೇತಿ, ವೇತನ ನೀಡುತ್ತದೆ. ಆಯಾ ಗ್ರಾಪಂಗಳ ಆರ್ಥಿಕ ಶಕ್ತಿ ಆಧಾರದ ಮೇಲೆ ಆಕರ್ಷಕ ವೇತನ ಕೂಡ ನಿಗದಿಯಾಗಿದೆ. ಕೌಶಲ್ಯ ಕರ್ನಾಟಕದ ವತಿಯಿಂದ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಮಾನ್ಯತೆ ಪಡೆದ ಚಾಲನಾ ತರಬೇತಿ ಸಂಸ್ಥೆ ವತಿಯಿಂದ ತರಬೇತಿ, ಡಿಎಲ್ ಸಹ ಕೊಡಿಸಲಾಗಿದೆ.

ಶಿವಮೊಗ್ಗದಲ್ಲಿ ಮಹಿಳಾ ಡ್ರೈವರ್​ಗಳು

ಸ್ವಚ್ಛ ಭಾರತ, ಜಿಲ್ಲಾ ಪಂಚಾಯತ್​​ ಅನುದಾನ ಬಳಸಿಕೊಂಡು ವಾಹನ ವ್ಯವಸ್ಥೆ, ಡಂಪಿಂಗ್ ಯಾರ್ಡ್ ಆಯ್ಕೆ, ಮನೆ ಮನೆಗೆ ಕಿಟ್ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಪಡೆದ ಮಹಿಳೆಯರು ಗ್ರಾಮ ಪಂಚಾಯತ್​​ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ಸ್ಥಳಾವಕಾಶ ಇರುವ ಕಡೆ ಆಯಾ ಗ್ರಾಮ ಪಂಚಾಯತ್​​ಗಳಲ್ಲೇ ಕಸ ವಿಲೇವಾರಿ ತಾಣಗಳನ್ನು ಗುರುತಿಸಲಾಗಿದೆ. ಸ್ಥಳ ಇಲ್ಲದ ಕಡೆ ಎರಡ್ಮೂರು ಗ್ರಾಮ ಪಂಚಾಯತ್​​ ಸೇರಿ ಕ್ಲಸ್ಟರ್ ಮಾಡಲಾಗಿದೆ. ಸೇಲ್ ಆಗದ ಕೆಲವು ಗುಜರಿ ಸಾಮಾನುಗಳನ್ನು ಎಂಆರ್‌ಎಫ್ (ಮೆಟಿರೀಯಲ್ ರಿಕವರಿ ಫೆಸಿಲಿಟಿ)ಯಲ್ಲಿ ಸಂಗ್ರಹಿಸಿ ಬೇಡಿಕೆ ಬಂದಾಗ ಮಾರುವ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾರದಲ್ಲಿ ಎರಡು ದಿನ ಒಂದು ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡಬೇಕು. ದೊಡ್ಡ ಗ್ರಾಮಗಳಾಗಿದ್ದರೆ ದಿನಕ್ಕೊಮ್ಮೆ ಮಾಡಲಾಗುವುದು. ಕಸ ಸಂಗ್ರಹಣೆ ಹಾಗೂ ವಿಂಗಡಣೆ, ಚಾಲಕರಿಗೆ ಆಯಾ ಗ್ರಾ.ಪಂಗಳೇ ವೇತನ ನಿಗದಿ ಮಾಡಬಹುದು. ಖರ್ಚು ವೆಚ್ಚ, ಆದಾಯದ ಆಧಾರದ ಮೇಲೆ ವೇತನ ನಿಗದಿಗೆ ಅವಕಾಶ ನೀಡಲಾಗಿದೆ. ಚಾಲಕರಿಗೆ ಕನಿಷ್ಠ 15 ಸಾವಿರ ರೂ. ಸಂಬಳ ನೀಡಲು ಉದ್ದೇಶಿಸಲಾಗಿದೆ.

ಖರ್ಚು ವೆಚ್ಚ ನಿರ್ವಹಣೆಗೆ ಆಯಾ ಗ್ರಾಮಗಳಿಂದಲೇ ಆದಾಯ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ತಿಂಗಳಿಗೆ ಪ್ರತಿ ಮನೆಯಿಂದ 20ರಿಂದ 30 ರೂಪಾಯಿ, ಅಂಗಡಿಗಳಾದರೆ 100 ರೂ., ಬಾರ್, ಹೋಟೆಲ್‌ಗಳಾದರೆ 500 ರೂ.ವರೆಗೂ ಸಂಗ್ರಹ ಮಾಡಬಹುದು. ಗ್ರಾಮಗಳ ಸ್ಥಿತಿಗತಿಗೆ ತಕ್ಕಂತೆ ಕೂಡ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾ.ಪಂಗಳಿದ್ದು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗದಲ್ಲಿ 30, ಚಿತ್ರದುರ್ಗದಲ್ಲಿ 30, ರಾಯಚೂರಿನಲ್ಲಿ 31 ಮಂದಿಗೆ ಚಾಲನಾ ತರಬೇತಿ ನೀಡಲಾಗಿದೆ. ಇವರು ಈಗಾಗಲೇ ಪಡೆದು ನವೆಂಬರ್ 1ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ.

ಇದನ್ನೂ ಓದಿ:ಮನೆ ಕಟ್ಟಲು ತೆಗೆದ ಬುನಾದಿ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಸಾವು

ABOUT THE AUTHOR

...view details