ಶಿವಮೊಗ್ಗ: ಮಾನವ ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ತಲೆಗೊಂದು ಸೂರು ಸೇರಿವೆ. ಆದರೆ, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಬೆಳಗಲ್ಲು ಗ್ರಾಮ ಕನಿಷ್ಠ ನಾಗರಿಕ ಮೂಲ ಸೌಕರ್ಯಗಳಿಂದ ದಶಕಗಳಿಂದ ವಂಚಿತವಾಗಿದೆ.
ಬೆಳಗಲ್ಲು ಗ್ರಾಮ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಈ ಗ್ರಾಮದಲ್ಲಿರುವುದು ಕೇವಲ 20 ಮನೆಗಳು. ಗ್ರಾಮಕ್ಕೆ ಹೋಗಲು ಶಿವಮೊಗ್ಗದಿಂದ ಶೃಂಗೇರಿ ಮಾರ್ಗದಲ್ಲಿ ಸಿಗುವ ಉಂಬ್ಳೆಬೈಲು ಗ್ರಾಮದಿಂದ ಐದಾರು ಕಿ.ಮೀ ದೂರ ಸಾಗಿದರೆ ಕೊರಲಕೊಪ್ಪ ಗ್ರಾಮ ಸಿಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯ ಪಕ್ಕದ ಕಾಡಿನ ರಸ್ತೆಯಲ್ಲಿ 5 ಕಿ.ಮೀ ದೂರ ಸಾಗಿದರೆ ಬೆಳಗಲ್ಲು ಗ್ರಾಮ ಕಾಣಿಸುತ್ತದೆ. ಈ ಗ್ರಾಮಕ್ಕೆ ಸಾಗಲು ರಸ್ತೆಯೇ ಇಲ್ಲ. ಇದು ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಗ್ರಾಮಕ್ಕೆ ರಸ್ತೆಯನ್ನು ಮಾಡಲು ಅರಣ್ಯ ಇಲಾಖೆ ಬಿಟ್ಟಿಲ್ಲ ಎಂದು ತಳಿದು ಬಂದಿದೆ.
ಮೂಲ ಸೌಕರ್ಯ ವಂಚಿತ ಕುಗ್ರಾಮ:ಬೆಳಗಲ್ಲು ಗ್ರಾಮದಲ್ಲಿ 20 ಮನೆಗಳಿದ್ದು, ಇವರು ಕಳೆದ ಮೂರು ತಲೆಮಾರುಗಳಿಂದ ಇಲ್ಲಿ ವಾಸವಾಗಿದ್ದಾರೆ. ಇದು ತುಂಗಾ ಅಣೆಕಟ್ಟೆಯ ಹಿನ್ನೀರಿನ ಪ್ರದೇಶ. ಹಿಂದೆ ಈ ಗ್ರಾಮದವರು ನದಿ ದಂಡೆಯ ಮೇಲೆ ಕೃಷಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ತುಂಗಾ ಮೇಲ್ದಂಡೆ ಯೋಜನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಂಡರು. ಬಳಿಕ ಹಿನ್ನೀರಿನಲ್ಲಿ ನೀರು ನಿಲ್ಲುವ ಪ್ರಮಾಣ ಹೆಚ್ವಾದ ಕಾರಣ ಗ್ರಾಮಸ್ಥರು ಹಾಲಿ ಇರುವ ಜಾಗದಲ್ಲಿ ಬಂದು ನೆಲೆಸಿದ್ದಾರೆ. ಕಳೆದ ಮೂರು ತಲೆಮಾರುಗಳಿಂದ ಇಲ್ಲಿಯೇ ನೆಲೆಸಿರುವ ಇವರಿಗೆ ಶಾಶ್ವತ ನೆಲೆ ಕಲ್ಪಿಸುವಲ್ಲಿ ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳು ವಿಫಲವಾಗಿವೆ.
ಹುಲ್ಲಿನ ಗುಡಿಸಲಲ್ಲಿ ವಾಸ: ಗ್ರಾಮದವರು ಇನ್ನೂ ಹುಲ್ಲಿನ ಗುಡಿಸಲಲ್ಲಿ ವಾಸವಾಗಿದ್ದಾರೆ ಎಂದರೆ ಇವರ ಬಡತನ ಹಾಗೂ ಎಲ್ಲಾರಿಗೂ ಸೂರು ಎನ್ನುವ ಸರ್ಕಾರದ ಘೋಷಣೆಗಳು ಕೇವಲ ಜಾಹೀರಾತಿನಲ್ಲಿ ಮಾತ್ರ ಎಂದು ಸಾಬೀತಾಗಿದೆ. ಈ ಗ್ರಾಮಸ್ಥರು ಇರುವ ಕೃಷಿ ಭೂಮಿ ಕಳೆದುಕೊಂಡು ಬೇರೆ ಕಡೆ ಪ್ರತಿ ದಿನ ನಡೆದುಕೊಂಡು ಹೋಗಿ ಕೊಲಿ ಕೆಲಸ ಮಾಡಬೇಕಿದೆ. ಕೆಲವರು ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸಾಲ ಪಡೆದು ಮನೆಗಳಿಗೆ ಹಂಚನ್ನು ಹಾಕಿಸಿಕೊಂಡಿದ್ದಾರೆ. ಈ ಸಾಲವನ್ನು ತೀರಿಸಲು ಇವರು ಕಷ್ಟಪಡಬೇಕಿದೆ. ಇವರು ಇರುವ ಮನೆಗಳಿಗೆ ಪಟ್ಟ, ರಸ್ತೆ, ಕುಡಿಯುವ ನೀರು ಹಾಗೂ ಶೌಚಾಲಯಗಳಿಲ್ಲ.
ಕಿಮ್ಮನೆ ಅವರಿಂದ ಬೆಳಕು ಕಂಡ ಬೆಳಗಲ್ಲು:ಬೆಳಗಲ್ಲು ಗ್ರಾಮ ಶಿವಮೊಗ್ಗ ತಾಲೂಕು ಆಡಳಿತಕ್ಕೆ ಒಳಪಟ್ಟರು ಇದು ತೀರ್ಥಹಳ್ಳಿ ವಿಧಾನಸಭ ಕ್ಷೇತ್ರಕ್ಕೆ ಒಳಪಡುತ್ತದೆ. ಇದರಿಂದ ಕಳೆದ ಬಾರಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟಿದ್ದಾರೆ. ಇದರಿಂದ ಮನೆಗಳಿಗೆ ಬೆಳಕು ಬಂದಿದೆ.
ವಿದ್ಯುತ್ ಬಂದ ಕಾರಣ ಉಂಬ್ಳೆಬೈಲು ಗ್ರಾಮ ಪಂಚಾಯತಿರವರು ಬೋರ್ ಕೊರೆಯಿಸಿ ಒಂದು ವಾರ ಕುಡಿಯುವ ನೀರು ಒದಗಿಸಿದರು. ನಂತರ ಆ ಮೋಟಾರನ್ನು ಕಿತ್ತುಕೊಂಡು ಹೋಗಿ 8 ವರ್ಷವಾದರೂ ಮೋಟಾರ್ ವಾಪಸ್ ಬಂದಿಲ್ಲ. ಇದರಿಂದ ಗ್ರಾಮಸ್ಥರು, ತುಂಗಾ ಹಿನ್ನೀರನ್ನು ಕುಡಿಸಲು ಬಳಸುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನೀರು ಕೆಸರಿನಿಂದ ಕೂಡಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಅದೇ ನೀರನ್ನು ಎರಡು ದಿನ ಹಾಗೇಯೇ ಇಟ್ಟು ನಂತರ ಬಳಸುವ ಅನಿವಾರ್ಯತೆ ಇರುತ್ತದೆ.
ಶಾಲೆ ಬಲು ದೂರ:ಶಾಲೆಗೆ ಬೆಳಗಲ್ಲು ಗ್ರಾಮದಿಂದ ಕೊರಲಕೊಪ್ಪ ಗ್ರಾಮಕ್ಕೆ ಬರಬೇಕು. ಕಾಡಿನಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣ ಮಕ್ಕಳು ಪ್ರತಿ ನಿತ್ಯ ನಡೆದುಕೊಂಡೆ ಹೋಗಬೇಕಾಗಿದೆ. ಇದರಿಂದ ಶಾಲೆಗೆ ಹೋಗಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಯುವಕರು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ. ಗ್ರಾಮದಲ್ಲಿ ಶ್ವೇತ ಎಂಬ ಏಕೈಕ ಯುವತಿ ಬಿಎಸ್ಸಿ ಪದವಿ ಪಡೆದುಕೊಂಡಿದ್ದಾಳೆ. ಉಳಿದಂತೆ ಐದಾರು ಮಂದಿ ಪಿಯುಸಿ ಮುಗಿಸಿದ್ದಾರೆ. ಉಳಿದಂತೆ ಎಲ್ಲರು ಹೈಸ್ಕೂಲ್ ಕೊನೆ.
ಹಿನ್ನೀರಿನ ಪ್ರದೇಶವಾದ ಕಾರಣ ಇಲ್ಲಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳು ಬರುತ್ತವೆ. ರಾತ್ರಿಯಾದರೆ ಮನೆಯಲ್ಲಿ ಜೀವ ಭಯದಲ್ಲಿ ಬದುಕುವ ಸ್ಥಿತಿ ಇದೆ. ಪಂಚಾಯತಿಯಿಂದ ಐದಾರು ಮನೆಗಳಿಗೆ ಶೌಚಾಲಯ ನೀಡಿದ್ದಾರೆ. ಉಳಿದವರು ಬೆಳಕಾಗುವ ಒಳಗೆ ಇಲ್ಲವೆ ಕತ್ತಲಾದ ಮೇಲೆ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ.