ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ತೋಟದಗದ್ದೆಯಲ್ಲಿ ಒಬ್ಬ ವ್ಯಕ್ತಿಗೆ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ನವೆಂಬರ್ನಲ್ಲಿ ಕಾಣಿಸಿ ಕೊಂಡಿದ್ದ ಈ ಕಾಯಿಲೆ ಈ ವರ್ಷ ಸೆಪ್ಟೆಂಬರ್ನಲ್ಲಿಯೇ ಕಾಣಿಸಿ ಕೊಂಡಿದೆ. ಇದರಿಂದ ಜಿಲ್ಲೆಯ ಕಾಡಂಚಿನ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಅವಧಿಗು ಮೊದಲೇ ಕಾಣಿಸಿಕೊಂಡ ಮಂಗನ ಕಾಯಿಲೆ ಆರೋಗ್ಯ ಇಲಾಖೆಯು ಕೆಎಫ್ಡಿ ತಡೆಗೆ ಲಸಿಕೆ ಹಾಗೂ ಡಿಎಂಪಿ ತೈಲ ನೀಡುತ್ತಿದೆ. ಎಲ್ಲೆಲ್ಲಿ ರೋಗ ಕಾಣಿಸಿಕೊಳ್ಳಬಹುದು ಎಂದು ನಿರ್ಧರಿಸಿ ಅಲ್ಲಿ ಈಗ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿಂದೆ ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತಿದ್ದ ಗ್ರಾಮಸ್ಥರು ಈಗ ಅವರೇ ಅಭಿಯಾನದಲ್ಲಿ ಬಂದು ಚುಚ್ಚು ಮದ್ದು ಹಾಕಿಸಿ ಕೊಳ್ಳುತ್ತಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ ಹೋಬಳಿಯ ಮಲ್ಮನೆ ಸುತ್ತಮುತ್ತಲ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಜೊತೆಗೆ ಡಿಎಂಪಿ ಆಯಿಲ್ ಸಹ ವಿತರಣೆ ಮಾಡಲಾಗುತ್ತಿದೆ.
ಜಾನುವಾರುಗಳನ್ನು ಮೇಯಿಸಲು, ದರಗು ಸೇರಿದಂತೆ ತೋಟಗಳಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಭಾಗದ ಜನ ಇದ್ದಾರೆ. ಕಾಡಿನ ಮಂಗ ಸತ್ತ ನಂತರ ಉಣುಗುಗಳು ಬೇರೆ ಬೇರೆ ಕಡೆ ಹರಡುತ್ತವೆ. ಈ ವೇಳೆ, ಕಾಡಿಗೆ ಹೋದಾಗ, ಜಾನುವಾರುಗಳಿಗೆ ಸಹ ಉಣುಗು ಹತ್ತುತ್ತವೆ. ಜಾನುವಾರುಗಳೂಂದಿಗೆ ಜನ ಸತತ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ ಮನುಷ್ಯರಿಗೆ ಉಣುಗು(ಉಣ್ಣೆ) ಕಚ್ಚಿದರೆ ಕೆಎಫ್ಡಿ ರೋಗ ಬರುತ್ತದೆ. ಇದರಿಂದ ಕಾಡಿಗೆ ಹೋಗುವವರು ಡಿಎಂಪಿ ತೈಲವನ್ನು ಮೈಗೆ ಸವರಿಕೊಳ್ಳುವುದರಿಂದ ಉಣುಗು ಮೈಗೆ ಹತ್ತುವುದಿಲ್ಲ ಹಾಗೂ ಕಚ್ಚಲು ಆಗುವುದಿಲ್ಲ.