ಶಿವಮೊಗ್ಗ :ಶ್ರೀರಾಮಮಂದಿರ ನಿರ್ಮಾಣದ ಲೆಕ್ಕ ಕೇಳುವ ಅಧಿಕಾರ ಕುಮಾರಸ್ವಾಮಿಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು.. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಪಾರದರ್ಶಕತೆ ಇದ್ದರೆ ಬಿಜೆಪಿಯವರಿಗೆ ಲೆಕ್ಕ ಕೊಡಲು ಏನು ತೊಂದರೆ ಎಂದು ಭದ್ರಾವತಿಯಲ್ಲಿ ಹೇಳಿಕೆ ನೀಡಿದ್ದರು.
ಇದಕ್ಕೆ ಶಿವಮೊಗ್ಗದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಾರು ರಾಮಮಂದಿರ ನಿರ್ಮಾಣಕ್ಕೆ ದುಡ್ಡು ಕೊಟ್ಟಿದ್ದಾರೋ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ. ಇವರಿಗೇನು ಅಧಿಕಾರ ಇದೆ ಅಂತಾ ಲೆಕ್ಕ ಕೇಳುತ್ತಾರೆ ಎಂದು ಪ್ರಶ್ನಿಸಿದರು.
ಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನೂ ಕೊಡದೇ ಈಗ ಲೆಕ್ಕ ಕೊಡಿ ಎಂದರೆ ಹೇಗೆ? ಹಾಗೇನಾದರೂ ಕೊಟ್ಟಿದ್ದರೆ ಲೆಕ್ಕ ಕೇಳಲಿ, ಆಗ ಸಂತೋಷ ಆಗುತ್ತೆ ಅದನ್ನು ಬಿಟ್ಟು ಒಂದು ರೂಪಾಯಿ ದುಡ್ಡು ಕೊಡದೆ ಪುಕ್ಸಟ್ಟೆ ರಾಮಮಂದಿರದ ಲೆಕ್ಕ ಕೊಡಿ ಎಂದರೆ ಇವ್ಯರ್ಯಾರು ಲೆಕ್ಕ ಕೇಳೋಕೆ ಎಂದು ರೇಗಿದರು.
ರಾಮ ಮಂದಿರದ ಬಗ್ಗೆ ಶ್ರದ್ಧೆ ಇದ್ದರೆ ಒಂದು ರೂಪಾಯಿ ಹಣ ನೀಡಿದ್ದರೆ ಲೆಕ್ಕ ಕೇಳುವ ಅಧಿಕಾರ ಇದೆ. ಇಲ್ಲ ಅಂದ್ರೆ ಇವರಿಗೆ ಲೆಕ್ಕ ಕೇಳೋ ಅಧಿಕಾರವೂ ಇಲ್ಲ, ಅವಶ್ಯಕತೆಯೂ ಇಲ್ಲ ಎಂದರು.
ಎರಡು ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ :ಉಪಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಎರಡೂ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತೆ ಅನುಮಾನ ಬೇಡ. ಈ ಹಿಂದೆ ನಡೆದ ಎಲ್ಲಾ ಉಪ ಚುನಾವಣೆಯಲ್ಲಿ ಸಹ ನಾವು ಗೆದ್ದಿದ್ದೇವೆ ಈಗಲು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.