ಶಿವಮೊಗ್ಗ:ತೀರ್ಥಹಳ್ಳಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರಗತಿಪರ ರೈತ ಹಾಗೂ ಯುವ ಮುಖಂಡ ರಾಜಾರಾಮ್ ಯಡೂರ್ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕಾರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯೆ ಈಗ ಯುವ ಮುಖವನ್ನು ತರುವ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅಚ್ಚರಿ ಮೂಡಿಸಿದ್ದಾರೆ.
ಮಲೆನಾಡಿನಲ್ಲಿ ಅಳಿದು ಉಳಿದಿರುವ ಜೆಡಿಎಸ್ ಬಲಪಡಿಸಲು ಆಯ್ದ ತಾಲೂಕುಗಳಲ್ಲಿ ರಣತಂತ್ರ ಹೆಣೆದಿರುವ ಕುಮಾರಸ್ವಾಮಿ ತೀರ್ಥಹಳ್ಳಿಯಲ್ಲಿಯೂ ಪ್ರಾಬಲ್ಯವಿರುವ ಒಕ್ಕಲಿಗ ಯುವಕ ರಾಜಾರಾಮ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಾರಾಮ್ ತನ್ನ ಆಯ್ಕೆ ಖುಷಿ ತಂದಿದೆ ಎಂದಿದ್ದಾರೆ.
ನನಗೆ ಬಹಳ ಹೆಮ್ಮೆಯಾಗುತ್ತಿದೆ. ಸಮಾಜವಾದಿ ನೆಲದಲ್ಲಿ ನನ್ನ ರಾಜಕೀಯ ಜೀವನ ಆರಂಭ ಮಾಡುತ್ತಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ರೈತ ಕುಟುಂಬದ ಒಬ್ಬ ಯುವಕನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ರೈತಾಪಿ ಕುಟುಂಬದಿಂದ ಆಯ್ಕೆ ಮಾಡಿರೋದು ಖುಷಿ ತಂದಿದೆ. ಇದು ನನ್ನ ಪುಣ್ಯ, ನಾನು ತೀರ್ಥಹಳ್ಳಿ ಕ್ಷೇತ್ರದ ಜನರ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ರಾಜಾರಾಮ್ ಹೇಳಿದ್ದಾರೆ.
ಕೃಷಿಕರು, ಯುವಕರು, ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಸಮುದಾಯದ ಪರ ಕೆಲಸ ಮಾಡಲು ನಾನು ಸಿದ್ಧನಾಗಿದ್ದೇನೆ. ಈ ಸಲ ಜನ ಆಶೀರ್ವಾದ ಮಾಡೇ ಮಾಡುತ್ತಾರೆ. ರಾಜ್ಯದಲ್ಲಿ ತೀರ್ಥಹಳ್ಳಿ ಕ್ಷೇತ್ರ ಮಹತ್ವವನ್ನು ಪಡೆದಿದೆ. ಗೋಪಾಲಗೌಡರಂಥ ಪ್ರಾಮಾಣಿಕ ರಾಜಕಾರಣಿ ಇದ್ದಂತಹ ನೆಲ ಇದು. ದೇವೇಗೌಡರು, ಕುಮಾರಸ್ವಾಮಿ ಜೊತೆ ಪಕ್ಷದ ಎಲ್ಲ ವರಿಷ್ಠರಿಗೂ ನನ್ನ ಧನ್ಯವಾದಗಳು. ಎಲ್ಲ ಕಾರ್ಯಕರ್ತರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.