ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ. ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶಾಸಕರಾದ ಕುಮಾರ ಬಂಗಾರಪ್ಪ ಸೊರಬ ತಾಲೂಕಿನ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿಯ ಜೋಳದಗುಡ್ಡೆ, ಪುರ, ಚಿಕ್ಕಮಾಕೊಪ್ಪ, ನ್ಯಾರ್ಶಿ ಗ್ರಾಮಗಳ ಸುಮಾರು ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿವೆ. ವರದಿ ನದಿಯ ಪ್ರವಾಹದಿಂದ ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಇದರಿಂದ ಕೋಟ್ಯಂತರ ರೂ. ನಷ್ಟವುಂಟಾಗಿದೆ. ತಕ್ಷಣ ಕೃಷಿ ಅಧಿಕಾರಿಗಳು ಸರ್ವೆ ನಡೆಸಿ, ವರದಿ ನೀಡುವಂತೆ ಕುಮಾರ ಬಂಗಾರಪ್ಪ ಆದೇಶ ನೀಡಿದರು. ಚಂದ್ರಗುತ್ತಿ ಹೋಬಳಿಯ ಬಳಿಕ ಕಡಸೂರು, ತಟ್ಟೆಗುಂಡಿ, ಸೂರಗುಪ್ಪೆ, ಹಿರೆನೆಲ್ಲೂರು, ಕಾಗೋಡು, ಮಂಡಗಳಲೆ, ಸೈದೂರು, ತಡಗಳಲೆ, ಕಣಸೆ, ಕೆರೆಹಳ್ಳಿ, ಬಂಕಸಾಣ, ಜಡೆ ಹಾಗೂ ಆನವಟ್ಟಿ ಹೋಬಳಿಗಳಿಗೆ ಭೇಟಿ ನೀಡಿದರು.
ಈ ವೇಳೆ, ಸೊರಬ ತಹಶೀಲ್ದಾರ್, ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.
ನರೆಪೀಡಿತ ಪ್ರದೇಶಗಳಿಗೆ ಕುಮಾರ ಬಂಗಾರಪ್ಪ ಭೇಟಿ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ತೆರೆದ ವಸ್ತು ಸಂಗ್ರಹಾಲಯದ ಮೇಲೆ ಮರ ಬಿದ್ದು ಹಾನಿ :
ಜಿಲ್ಲೆಯ ಇತಿಹಾಸ ಪ್ರಸಿದ್ಧ ಶಿವಪ್ಪ ನಾಯಕ ಅರಮನೆಯ ತೆರೆದ ವಸ್ತು ಸಂಗ್ರಹಾಲಯದ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಅರಮನೆ ಆವರಣದ ಕಂಪೌಂಡ್ ಬಳಿ ಇದ್ದ ಮರ ಜೋರಾದ ಗಾಳಿ-ಮಳೆಯಿಂದ ಧರೆಗುರುಳಿದೆ. ಮರ ಬಿದ್ದ ಪರಿಣಾಮ ಕಂಪೌಂಡ್ ಗೋಡೆ ಕುಸಿದಿದ್ದು, ಸಂಗ್ರಹಾಲಯದ 12 ಶತಮಾನದ ಜೀನ ವಿಗ್ರಹಗಳು, 14-15 ಶತಮಾನದ ವಿಷ್ಣು ಹಾಗೂ ಮಹಾಸತಿ ಕಲ್ಲುಗಳ ಮೇಲೆ ಬಿದ್ದಿದೆ. ವಿಗ್ರಹಗಳನ್ನು ಪೀಠಗಳ ಮೇಲೆ ಕೂರಿಸಲಾಗಿತ್ತು. ಮರ ಬಿದ್ದ ಪರಿಣಾಮದಿಂದ ವಿಗ್ರಹಗಳು ಪೀಠದ ಸಮೇತ ಬಿದ್ದಿವೆ. ವಿಗ್ರಹಗಳಿಗೆ ಹೆಚ್ಚಿನ ಹಾನಿಯಾಗಿಲ್ಲವಾದರೂ ವಿಗ್ರಹಗಳನ್ನು ಹೊಸದಾಗಿ ಪೀಠ ಮಾಡಿ ಕೂರಿಸಬೇಕಾಗಿದೆ. ಬೃಹದಾಕಾರದ ಮರ ಬಿದ್ದ ಕಾರಣ ಅರಮನೆಯ ಸ್ವಲ್ಪ ಭಾಗಕ್ಕೆ ಧಕ್ಕೆಯುಂಟಾಗಿದೆ. ಪ್ರಾಚ್ಯವಸ್ತು ಹಾಗೂ ಸಂಗ್ರಹಾಲಯದ ಸಹಾಯಕ ನಿರ್ದೇಶಕರಾದ ಶೇಜೇಶ್ವರ್ ಪರಿಶೀಲನೆ ನಡೆಸಿದ್ದಾರೆ.