ಶಿವಮೊಗ್ಗ : ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಜೊತೆಗೆ ಪಕ್ಷದ ಸಂಘಟನಾ ದೃಷ್ಟಿಯಿಂದ ಹಮ್ಮಿಕೊಂಡಿರುವ ಜನ ಸಂಕಲ್ಪ ಯಾತ್ರೆ ಸೊರಬ ತಾಲೂಕಿನ ಆನವಟ್ಟಿ ಪಟ್ಟಣಕ್ಕೆ ನ.15ರಂದು ಆಗಮಿಸಲಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ತಾಲೂಕಿನ ಆನವಟ್ಟಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜನ ಸಂಕಲ್ಪ ಯಾತ್ರೆಯ ಪೂರ್ವ ಸಿದ್ಧತೆ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆಯನ್ನು ಮೂರು ತಂಡಗಳಾಗಿ ರಚಿಸಲಾಗಿದ್ದು, ಜಿಲ್ಲೆಯಲ್ಲಿ ಆನವಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಯಾತ್ರೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನ ಪ್ರತಿನಿಧಿಗಳು, ಸಚಿವರು, ಪಕ್ಷದ ಪದಾಧಿಕಾರಿಗಳು, ತಾಲೂಕಿನ 239 ಬೂತ್‌ಗಳ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಕ್ಕೆ ವಿಶೇಷ ಪ್ರಣಾಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಸಾಧನಾ ಕೈಪಿಡಿಯನ್ನು ಬಿ.ಎಸ್. ಯಡಿಯೂರಪ್ಪ ಬಿಡುಗಡೆಗೊಳಿಸಲಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸದಂತೆ ರಸ್ತೆ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಭೂತ ಸೌಲಭ್ಯಗಳ ಕುರಿತು ಮತ್ತು ಶಿರಾಳಕೊಪ್ಪ-ಸೊರಬ ರಸ್ತೆಯನ್ನು ಚತುಷ್ಪಥ ಮಾಡುವುದು, ತಾಳಗುಪ್ಪದಿಂದ ಸೊರಬ-ಆನವಟ್ಟಿ ಮಾರ್ಗವಾಗಿ ಹುಬ್ಬಳ್ಳಿ ರೈಲ್ವೆ ಸಂಪರ್ಕ ಕಲ್ಪಿಸುವ ಕುರಿತು ಮನವಿ ಮಾಡಲಾಗುವುದು ಎಂದು ಹೇಳಿದರು.