ಶಿವಮೊಗ್ಗ: ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ಬಳಿಸಿ ರೈತರನ್ನು ವಿರೋಧ ಪಕ್ಷಗಳು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಮಸೂದೆ ಜಾರಿಗೆ ತಂದಾಗ ದೇಶದ ರೈತರು ಸಂತೋಷ ಪಟ್ಟಿದ್ದಾರೆ. ರೈತರ ಹೆಸರಿನಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು, ನಾಯಕರು ಅಂತ ಅಂದುಕೊಂಡವರು, ರೈತರಲ್ಲದವರು ಮಸೂದೆಯನ್ನು ವಿರೋಧ ಮಾಡ್ತಾ ಇದ್ದಾರೆ. ಈ ಬಗ್ಗೆ ದೇಶದ ರೈತರು ಸತ್ಯ ಅರಿತುಕೊಳ್ಳಬೇಕು ಎಂದರು.
ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹಾಗೂ ಬಿ.ವೈ ರಾಘವೇಂದ್ರ ಜಂಟಿ ಸುದ್ದಿಗೋಷ್ಟಿ ಕಾಂಗ್ರೆಸ್ನವರು ಮತ್ತೆ ಮತ್ತೆ ಸುಳ್ಳು ಹೇಳ್ತಾ ಇದ್ದಾರೆ. ಸುಳ್ಳಿಗೆ ರೈತರು ಬಲಿಯಾಗಬಾರದು ಎಂದು ಸಚಿವ ಈಶ್ವರಪ್ಪ ರಾಜ್ಯದ ಜನತೆಗೆ ಮನವಿ ಮಾಡಿಕೊಂಡರು. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ನವರು ನಿಸ್ಸೀಮರು. ರಫೆಲ್ ಹಗರಣವನ್ನು ಸುಪ್ರೀಂಕೋರ್ಟ್ ಇದು ಸುಳ್ಳು ಎಂದಿದೆ. ಸಿಎಎ ಕಾಯ್ದೆಯಲ್ಲೂ ಸಹ ದೇಶದ ಜನತೆಯ ದಾರಿ ತಪ್ಪಿಸಲು ಹೋದರು, ಆದರೆ ದೇಶದ ಜನ ಮೋದಿ ಪರವಾಗಿದ್ದರು ಎಂದರು.
ಕೃಷಿ ಮಸೂದೆಯ ಬಗ್ಗೆ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ರೈತರು ಮೋದಿಯವರಿಗೆ ಬೆಂಬಲ ನೀಡಬೇಕೆಂದರು. ಭೂ ಸುಧಾರಣಾ ಕಾಯ್ದೆಯ ಬಗ್ಗೆ ಟೀಕೆ ಮಾಡಲು ಸಿದ್ದರಾಮಯ್ಯನವರಿಗೆ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ನವರಿಗೆ ಬಿಜೆಪಿ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗಬೇಕು ಎಂದರು.
ಇನ್ನು ಈ ಕುರಿತು ಮಾತನಾಡಿದ ಸಂಸದ ಬಿ.ವೈ ರಾಘವೆಂದ್ರ, ಪ್ರಧಾನಿ ಮೋದಿಯವರು ಕೃಷಿಕರಿಗೆ ನಿಜವಾದ ಸ್ವಾತಂತ್ರ್ಯವನ್ನು ತಂದಿದ್ದಾರೆ. ಇದನ್ನು ಸಹಿಸದವರು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸ್ವಾಭಿಮಾನದ ಬದುಕನ್ನು ಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿವೆ. ಇಂತಹ ಅತ್ಯುತ್ತಮ ಮಸೂದೆಯನ್ನು ಕಾಯ್ದೆಯನ್ನಾಗಿ ಮಾಡಲಾಗುತ್ತಿದೆ ಎಂದರು.