ಶಿವಮೊಗ್ಗ :ಹಿಂದುತ್ವದ ಮೇಲೆಯ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಸಿದ್ಧಾಂತವನ್ನು ಒಪ್ಪುವ ಸರ್ಕಾರ ರಾಜ್ಯದಲ್ಲಿದೆ. ಗಣಪತಿ ಹಬ್ಬವನ್ನು ಯಶಸ್ವಿಯಾಗಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಕೊರೊನಾ ಇರುವ ಹಿನ್ನೆಲೆ ಹೇಗೆ ಆಚರಣೆ ಮಾಡಬೇಕು, ಎಷ್ಟು ಜನ ಸೇರಿಸಬೇಕು ಎನ್ನುವುದನ್ನು ಮುಖ್ಯಮಂತ್ರಿಗಳು ಸಭೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು.
ಗಣಪತಿ ಹಬ್ಬದ ಕುರಿತು ಸಚಿವ ಈಶ್ವರಪ್ಪ ಹೇಳಿಕೆ ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ಉಲ್ಲಂಘನೆ :ಜನಾಶೀರ್ವಾದ ಯಾತ್ರೆಯಲ್ಲಿ ಜನ ಸೇರಿರುವುದನ್ನು ನಾನು ಭಾರತೀಯ ಜನತಾ ಪಕ್ಷದ ಸಚಿವನಾಗಿ ಒಪ್ಪುವುದಿಲ್ಲ. ಹಾಗಂತಾ, ಗಣೇಶ ಉತ್ಸವ ನಿಲ್ಲಿಸಬೇಕು ಎಂಬುವುದನ್ನು ಸಹ ನಾನು ಒಪ್ಪಲ್ಲ. ಆರೋಗ್ಯವೂ ಮುಖ್ಯ, ಅದರ ಕಡೆಗೂ ಗಮನ ನೀಡಬೇಕು ಎಂದರು.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಮತ :ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ. ಜನರು ಮತ್ತು ಕಾರ್ಯಕರ್ತರು ಪಕ್ಷದೊಂದಿಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ನಮ್ಮ ನಂಬಿಕೆ :ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತೆ ಎಂದಿರುವ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಮಿತ್ ಶಾ ಅವರು ಯಾವ ರೀತಿ ಹೇಳಿದ್ದಾರೆ ಎಂಬುವುದನ್ನು ಒಟ್ಟಿಗೆ ಕೂತು ಚರ್ಚೆ ಮಾಡಿ ತೀರ್ಮಾನ ತೇಗೆದುಕೊಳ್ಳುತ್ತೇವೆ. ಸಾಮೂಹಿಕ ನಾಯಕತ್ವದಲ್ಲೇ ನಮ್ಮ ಒಲವು ಇದೆ. ಏನೇ ಆದರೂ ಸಾಮೂಹಿಕ ನಾಯಕತ್ವ ನೇತ್ರತ್ವದಲ್ಲಿ ಚುನಾವಣೆ ನಡೆಯುತ್ತೆ ಎಂದರು.