ಶಿವಮೊಗ್ಗ: ಬಿಜೆಪಿ ಪಕ್ಷಕ್ಕೆ ಮತ ನೀಡದವರು ದೇಶದ್ರೋಹಿಗಳು ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡಿರುವ ಕೆ ಎಸ್ ಈಶ್ವರಪ್ಪ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಟಿಪ್ಪು ಸಹಾರ ಯುವಜನ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಜಮೀಲ್ ಆಗ್ರಹಿಸಿದರು.
ಕೆ ಎಸ್ ಈಶ್ವರಪ್ಪ ರಾಜ್ಯದ ಜನರ ಕ್ಷಮೆ ಕೇಳಬೇಕು.. ಸೈಯದ್ ಜಮೀಲ್ ಆಗ್ರಹ
ಸಚಿವ ಕೆ ಎಸ್ ಈಶ್ವರಪ್ಪನವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದು, ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಟಿಪ್ಪು ಸಹಾರ ಯುವಜನ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಜಮೀಲ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ ಎಸ್ ಈಶ್ವರಪ್ಪನವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿದವರು ಮಾತ್ರ ದೇಶಪ್ರೇಮಿಗಳು. ಬಿಜೆಪಿಗೆ ಮತ ಚಲಾಯಿಸದವರು ದೇಶದ್ರೋಹಿಗಳು ಎನ್ನುವ ರೀತಿಯಲ್ಲಿ ಮಾತನಾಡಿರುವುದು ಅಸಂವಿಧಾನಿಕ ಹೇಳಿಕೆಯಾಗಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.
ಬಿಜೆಪಿಯ ಅನೇಕ ಶಾಸಕರಿಗೆ ಸಂವಿಧಾನ ಮಾನವೀಯತೆ, ಸಮಾನತೆ, ಸ್ವಾತಂತ್ರ್ಯದ ಅರ್ಥವೇ ಗೊತ್ತಿಲ್ಲ. ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಿ ಸೌಹಾರ್ದತೆಯಿಂದ ಬದುಕುತ್ತಿರುವ ಜನರ ನಡುವೆ ಧಾರ್ಮಿಕ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಇದರಿಂದ ಸಮಾಜದ ನೆಮ್ಮದಿಗೆ ಭಂಗ ತಂದಂತಾಗುತ್ತದೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರಿಗೆ ಬೇಕಾದರೂ ಮತ ಚಲಾಯಿಸಬಹುದು. ಅವಹೇಳನಕಾರಿಯಾಗಿ ಮಾತನಾಡುವ ಹಕ್ಕನ್ನು ಕೆ ಎಸ್ ಈಶ್ವರಪ್ಪ ಅವರಿಗೆ ಕೊಟ್ಟವರು ಯಾರು? ಅವರು ಹೀಗೆ ತಮ್ಮ ನಾಲಿಗೆಯನ್ನು ಹರಿಬಿಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮದ ಜೊತೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.