ಶಿವಮೊಗ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪನವರಿಗೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ನಾನು ಎಸ್ಎಸ್ಎಲ್ಸಿ ಫೇಲ್ ಆದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು. ಅಮ್ಮನ ಬುದ್ಧಿವಾದದಿಂದ ಮತ್ತೆ ಶಾಲೆಗೆ ತೆರಳಿದ್ದೆ. ಆ ಘಟನೆ ನನ್ನ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎಂದು ಸಚಿವ ಈಶ್ವರಪ್ಪ ಹಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪರನ್ನು ತಡೆದ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವರಿಗೆ ಎದುರಾದ ಹಾಸ್ಟೆಲ್ ವಿದ್ಯಾರ್ಥಿಗಳು, ಹಾಸ್ಟೆಲ್ ಸ್ಥಳಾಂತರ ಬಗ್ಗೆ ವಿವರಣೆ ಕೇಳಿದ್ದಾರೆ.
ಪ್ರಸ್ತುತ ಇದ್ದ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದ್ದು, ಈ ಕಾರಣದಿಂದ ಅಧಿಕಾರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಎಲ್ಲ ವಿದ್ಯಾರ್ಥಿಗಳು ಸಹಕರಿಸುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಕೇಳಿಕೊಂಡಿದ್ದಾರೆ.
ಪೋಷಕರು ನಂಬಿಕೆ ಇರಿಸಿ ಹಾಸ್ಟೆಲ್ನಲ್ಲಿ ಬಿಟ್ಟಿದ್ದು ಹೀಗಾಗಿ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಕೆಲ ದಿನಗಳವರೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವಂತೆ ಹೇಳಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಈಶ್ವರಪ್ಪ ನೀಡಿದ್ದಾರೆ.