ಶಿವಮೊಗ್ಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ಸಿಬಿಐನಿಂದ ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವಸರವಾಗಿ ಸಚಿವ ಸಂಪುಟ ಸಭೆಯನ್ನು ಕರೆದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಅವಸರದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಕಳ್ಳ ಎಂದಿಗೂ ಕಳ್ಳನೇ. ಕಾಂಗ್ರೆಸ್ ಸರ್ಕಾರದವರು 139 ಜನರ ಬೆಂಬಲದ ಮೇಲೆ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ಪರ ಎಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಅಪೀಲು ಬಿದ್ದು ಹೋಗಿದೆ. 5 ವರ್ಷದಲ್ಲಿ 250 ಕೋಟಿ ಆಸ್ತಿ ಜಾಸ್ತಿಯಾಗಿದೆ ಎಂದು ಸಿಬಿಐ ವರದಿಯಲ್ಲೇ ಇದೆ ಎಂದರು.
ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕಾನೂನು ತಜ್ಞರು ಇಲ್ವಾ?, ಕಾನೂನು ತಜ್ಞರ ಗಮನಕ್ಕೆ ತಾರದೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟದಲ್ಲಿ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಇಡೀ ದೇಶದಲ್ಲೇ ಇದೇ ಮೊದಲು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಅದು ಹೇಗೆ ಸುಮ್ಮನಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಈ ಕೇಸ್ ವಾಪಸ್ಗೆ ಸಹಿ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
33 ಕೋಟಿ ಇರುವುದು 2018 ರಲ್ಲಿ 162.53 ಕೋಟಿಯಾಗಿದೆ. ಇಷ್ಟೆಲ್ಲಾ ಹೇಗೆ ಆಗಲು ಸಾಧ್ಯ. ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಸಿಕ್ಕಿರುವುದನ್ನು ಇಡೀ ದೇಶವೇ ನೋಡಿದೆ. ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಇವರು ಬಡ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇದು ಲೂಟಿಕೋರನಿಗೆ ರಕ್ಷಣೆ ಮಾಡಲು ಹೋಗಿರುವ ಮೊದಲ ಪ್ರಕರಣ. ಕ್ಯಾಬಿನೆಟ್ನಲ್ಲಿ ಈ ರೀತಿ ಕೇಸ್ ವಾಪಸ್ ಪಡೆದಿರುವುದು ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ. ಸಿಬಿಐ ತನಿಖೆ ಅಂತಿಮ ಹಂತದಲ್ಲಿರುವಾಗ ಈ ರೀತಿ ಮಾಡಿದ್ದು ಎಷ್ಟು ಸರಿ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದರ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು, ಶಾಸಕಾಂಗ ಸಭೆ ತೀರ್ಮಾನಿಸುತ್ತದೆ ಎಂದರು.