ಶಿವಮೊಗ್ಗ:"ಚಂದ್ರಯಾನ ಯಶಸ್ವಿಯಾಗುವುದನ್ನು ನಮ್ಮ ಕಣ್ಣಿಂದ ನೋಡುವ ಸೌಭಾಗ್ಯ ಸಿಕ್ಕಿದ್ದು ಪುಣ್ಯ" ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇಂದು ಇಡೀ ಪ್ರಪಂಚ ನಮ್ಮನ್ನು ಕೊಂಡಾಡುತ್ತಿದೆ. ಭಾರತೀಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ನಮ್ಮ ದೇಶದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆ ವಿಜ್ಞಾನಿಗಳಿಗೆ ಸಾಷ್ಟಾಂಗ ನಮಸ್ಕಾರ ತಿಳಿಸುತ್ತೇನೆ" ಎಂದರು.
"ಬರುವ ದಿನಗಳಲ್ಲಿ ದೇಶ ಒಂದು ಜಗತ್ತು ಎಂಬುದನ್ನು ಪ್ರಧಾನಿಗಳು ಹೇಳಿದ್ದಾರೆ. ಆ ದಿಕ್ಕಿನಲ್ಲಿ ನಾವು ಯಶಸ್ವಿಯಾಗೋಣ ಹಾಗೂ ಚಂದ್ರನ ದಕ್ಷಿಣ ಭಾಗಕ್ಕೆ ಮೊದಲನೇ ಬಾರಿ ಭಾರತೀಯ ಚಂದ್ರಯಾನ ಹೋಗಿ ಅಲ್ಲಿ ಯಶಸ್ವಿಯಾಗಿರುವುದು ಭಾರತೀಯರಾದ ನಮಗೆ ಹೆಮ್ಮೆ. ಈಗ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿ ನಾವು ಇದ್ದೇವೆ ಎನ್ನುವ ಗರ್ವ ನಮಗಿದೆ. ಇದಕ್ಕೆ ಕಾರಣರಾದ ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.