ಶಿವಮೊಗ್ಗ:ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದಾಖಲಾದ FIR ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಈ ರೀತಿಯ ಹೇಳಿಕೆ ನೀಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಕೊರೊನಾ ಓಡಿಸಲು ನಿರೀಕ್ಷೆಗೂ ಮೀರಿ ಹಣ ನೀಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿಯನ್ನು ವಾಜಪೇಯಿ ಅವರು ಯುದ್ಧ ಸಂದರ್ಭದಲ್ಲಿ ದುರ್ಗೆಗೆ ಹೋಲಿಸಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರು, ವಾಜಪೇಯಿ ಅವರು ಪ್ರತಿಪಕ್ಷದ ನಾಯಕರಾಗಿದ್ದರು. ಯುದ್ಧದ ಸಂದರ್ಭದಲ್ಲಿ ದೇಶವೇ ಒಂದಾಗಿರಬೇಕು ಎಂದು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದರು. ಈಗ ಮೋದಿ ಅವರನ್ನು ವಿಶ್ವದ ಮುಂಚೂಣಿ ನಾಯಕ ಅಂತ ಕರೆಯುತ್ತಿರುವಾಗ ಸೋನಿಯಾ ಗಾಂಧಿ ಅವರು ಇಂತಹ ಹೇಳಿಕೆ ನೀಡಬಾರದಿತ್ತು. ಸೋನಿಯಾ ಗಾಂಧಿ ಅವರ ಹೇಳಿಕೆಯಿಂದ ನೋವಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಸಹಕಾರ ನೀಡುತ್ತಿರುವಾಗ ಇದು ಬೇಡವಾಗಿತ್ತು. ಇವರ ಹೇಳಿಕೆಯನ್ನು ದೇಶದ ಜನ ಒಪ್ಪುತ್ತಾರೆ ಅಂತ ನನಗೆ ಅನ್ನಿಸುತ್ತಿಲ್ಲ. ಇದನ್ನು ಎಲ್ಲ ಕಾಂಗ್ರೆಸ್ನವರು ಒಪ್ಪುವುದಿಲ್ಲ ಎಂದರು.
ಅವರು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ ಅಂತ ನಾನು ಹೇಳುವುದಿಲ್ಲ. ದೇಶದ ಸಂವಿಧಾನ ಬದ್ಧ ಪ್ರಧಾನಿಯ ವಿರುದ್ಧ ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ವಕೀಲರೊಬ್ಬರು ದೂರು ನೀಡಿದ್ದಾರೆ. ದೂರನ್ನು ಪೊಲೀಸ್ ಅಧಿಕಾರಿ ಪರಿಶೀಲಿಸಬಹುದಾಗಿತ್ತು. ಆದರೂ ಅವರು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಇನ್ನು ಕೋವಿಡ್-19 ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಶಿವಮೊಗ್ಗ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 500 ಬೆಡ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಕೊರೊನಾ ವೈರಸ್ ಬಂದಿರುವುದು ಕಡಿಮೆ, ಬೇರೆ ಬೇರೆ ಕಡೆಯಿಂದ ಬಂದವರಿಂದಲೇ ಹೆಚ್ಚು. ಆದರೂ ಸಹ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 500 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ನಮ್ಮಂತಹ ರಾಕ್ಷಸರಿಗೆ ಬರುವುದಿಲ್ಲ ಎಂದು ತಮ್ಮನ್ನು ರಾಕ್ಷಸನಿಗೆ ತಮಾಷೆಗೆ ಹೋಲಿಸಿಕೊಂಡರು.
ಸಚಿವ ಈಶ್ವರಪ್ಪ ಪ್ರತಿಕ್ರಿಯೆ ಕೊರೊನಾ ಬರುತ್ತೆ ಅಂತ ಮನೆಯಲ್ಲಿ ಹೆಣದ ರೀತಿಯಲ್ಲಿ ಬಿದ್ಕೊಳ್ಳೊದಕ್ಕೆ ಆಗೋದಿಲ್ಲ. ಸಚಿವರು, ಸಂಸದರು ಮನೆಯಿಂದ ಹೊರಗೆ ಬಂದ್ರೆ ಅಭಿವೃದ್ಧಿ ಕೆಲಸವಾಗುತ್ತದೆ. ಇನ್ನು ಕೊರೊನಾ ಓಡಿಸುವ ದೃಷ್ಟಿಯಿಂದ ಜನರ ಸಹಕಾರವೂ ಬೇಕು ಎಂದರು.