ಶಿವಮೊಗ್ಗ:ನಾನು ಯಾವುದೆ ತಪ್ಪು ಮಾಡಿಲ್ಲ. ನಾನು ನೂರಕ್ಕೆ ನೂರು ರಾಜಿನಾಮೆ ನೀಡುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ನಮ್ಮ ಇಲಾಖೆಯಲ್ಲಿ ನಡೆದ ವಿಚಾರಕ್ಕೆ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಲ್ಲ. ವಿನಾ ಕಾರಣ ಅವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ರಾಜ್ಯದ ಎಲ್ಲಾ ಕಡೆಯಿಂದ ನನಗೆ ಪೋನ್ ಮಾಡಿ ರಾಜೀನಾಮೆ ನೀಡಬೇಡಿ ಎಂದು ಹೇಳುತ್ತಿದ್ದಾರೆ ಎಂದರು.
ಈ ರೀತಿ ಹಣ ಬಿಡುಗಡೆ ಮಾಡಿದ್ದಾರಾ?: ನಮ್ಮ ಇಲಾಖೆಯಲ್ಲಿ ಕೆಲಸ ಮಾಡಬೇಕಾದರೆ ವರ್ಕ್ ಆರ್ಡರ್, ಆಡಳಿತಾತ್ಮಕ ಅನುಮೋದನೆ ನಿಯಮದ ಪ್ರಕಾರವೇ ನಡೆಯಬೇಕು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಕೆಲವು ನಾಯಕರು ಸಂತೋಷ್ ಡೆತ್ ನೋಟ್ ಬರೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ತನಿಖೆಯಾಗಲಿ. ಆದರೆ, ಸರ್ಕಾರದ ನಿಯಮಾವಳಿ ಮುಗಿದ ಬಳಿಕವೇ ಹಣ ಬಿಡುಗಡೆ ಮಾಡುವುದು ಪದ್ಧತಿ. ಈ ಪದ್ಧತಿ ಇಲ್ಲದೇ ಕಾನೂನನ್ನು ಗಾಳಿಗೆ ತೂರಿ ಹಣ ಬಿಡುಗಡೆ ಮಾಡಲು ಬರುವುದಿಲ್ಲ. ಇವತ್ತು ಆರೋಪ ಮಾಡುತ್ತಿರುವ ವಿರೋಧ ಪಕ್ಷದವರು ಈ ಹಿಂದೆ ಯಾರಾದರೂ ಈ ರೀತಿ ಹಣ ಬಿಡುಗಡೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ವಾಟ್ಸಪ್ನಲ್ಲಿ ಟೈಪ್:ಗಣಪತಿ ಭಟ್ ವಿಚಾರದಲ್ಲಿ ನಾವು ರಾಜೀನಾಮೆ ಕೇಳಿದ್ದಕ್ಕೆ ಬಲವಾದ ಕಾರಣವಿದೆ. ಅದನ್ನು ಮುಂದಿಟ್ಟುಕೊಂಡು ಇಂದು ನೀವು ರಾಜೀನಾಮೆ ನೀಡಬೇಕೆಂದು ನನ್ನನ್ನು ಕೇಳುತ್ತಿದ್ದಾರೆ. ಅಂದು ಗಣಪತಿ ಭಟ್ ಡೆತ್ ಬರೆದಿಟ್ಟು ಸಾವನ್ನಪ್ಪಿದ್ದರು. ಆದರೆ, ಇಲ್ಲಿ ವಾಟ್ಸಪ್ನಲ್ಲಿ ಟೈಪ್ ಮಾಡಲಾಗಿದೆ. ನಾನು ಸಹ ವಾಟ್ಸಪ್ನಲ್ಲಿ ಬರೆದರೆ ಅದನ್ನು ನೀವು ಒಪ್ಪುತ್ತಿರಾ? ಸಂತೋಷ್ 80 ಸಲ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅವರು ಒಂದೂ ಸರಿಯೂ ನಮ್ಮ ಮನೆಗೆ ಬಂದಿಲ್ಲ. ಅವರ ಮುಖವನ್ನು ಸಹ ನಾನು ನೋಡಿಲ್ಲ ಎಂದರು.
ಯಾರು ಟಿಕೆಟ್ ಮಾಡಿ ಕೊಟ್ಟಿದ್ದು?ಈಶ್ವರಪ್ಪನವರು ಅಲ್ಲ, ಅವರ ಕಡೆಯವರು ಹಣ ಕೇಳಿದ್ದಾರೆ ಎಂದು ಇವರು ದೆಹಲಿ ತನಕ ಹೋಗಿದ್ದರು. ಇವರಿಗೆ ಯಾರು ಟಿಕೆಟ್ ಮಾಡಿ ಕೊಟ್ಟಿದ್ರು? ಸಂತೋಷ್ ನಡೆಸಿದ ಆರೋಪಕ್ಕೆ ನಮ್ಮ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಕಚೇರಿಗೆ ಪತ್ರ ಬರೆದಿದ್ದರು. ಇದಕ್ಕೆ ರಾಜ್ಯದಿಂದ ಪತ್ರ ಬರೆದಿದ್ದಾರೆ. ನಮ್ಮ ಇಲಾಖೆಯವರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಆಡಳಿತ್ಮಾಕವಾಗಿ ಹಣ ಮಂಜೂರು ಮಾಡಿಲ್ಲ ಎಂದು ಹೇಳಿದ್ದಾರೆ ಎಂದು ಈಶ್ವರಪ್ಪ ತಮ್ಮ ಇಲಾಖೆಯ ಕಾರ್ಯ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಮಾನನಷ್ಟ ಮೊಕ್ಕದ್ದಮೆ: ನಾನು ಸಂತೋಷ್ ಪಾಟೀಲ್ ಹಾಗೂ ಒಂದು ಖಾಸಗಿ ಚಾನಲ್ ಮೇಲೂ ಸಹ ಮಾನನಷ್ಟ ಮೊಕದ್ದನೆ ಹಾಕಿದ್ದೆ. ಕೋರ್ಟ್ ಇಬ್ಬರಿಗೂ ನೋಟಿಸ್ ನೀಡಿದೆ. ಸಂತೋಷ್ ನೋಟಿಸ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ನನ್ನ ಅನಿಸಿಕೆ. ಇದರಲ್ಲಿ ನೀತಿ, ನಿಯಮ ಇಲ್ಲದೆ ಹಣ ನೀಡುವ ಪ್ರಶ್ನೆಯೇ ಇಲ್ಲ. ಡೆತ್ ನೋಟ್ ಇಲ್ಲದೆ ಆಧಾರ ರಹಿತವಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಮಾತನಾಡುವವರಿಗೆ ತಕ್ಕ ಉತ್ತರ ನೀಡಲಾಗಿದೆ. ಸಂತೋಷ್ ಮೃತಪಟ್ಟಿರುವುದಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಇದೊಂದು ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಅನ್ನೋದು ತನಿಖೆ ಆಗಬೇಕು. ವಾಟ್ಸಪ್ನಲ್ಲಿ ಟೈಪಿಂಗ್ ಯಾರು ಮಾಡಿದ್ರು ಅಂತಲೂ ಬಹಿರಂಗ ಆಗಬೇಕಿದೆ ಎಂದರು.