ಶಿವಮೊಗ್ಗ:ಕ್ಷೇತ್ರವೇ ಇಲ್ಲದಿರುವ ಸಿದ್ದರಾಮಯ್ಯನವರು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ವರುಣಾ, ಚಾಮುಂಡೇಶ್ವರಿ, ಬದಾಮಿ ಹೀಗೆ ಕ್ಷೇತ್ರವಿಲ್ಲದೇ ಇರುವುದರಿಂದ ಸಿದ್ದರಾಮಯ್ಯ ಅವರಿಗೆ ದಿಕ್ಕೇ ತೋಚದಂತೆ ಆಗಿದೆ. ಮೊದಲು ಹೈಕಮಾಂಡ್ ಹೇಳಿದಂತೆ ಸ್ಪರ್ಧೆ ಅಂತ ಅಂದ್ರು, ಈಗ ಹೆಂಡ್ತಿ ಹಾಗೂ ಮಗನನ್ನು ಕೇಳಿ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಇಂತಹವರು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಎಂದು ಈಶ್ವರಪ್ಪ ಕೇಳಿದರು.
ಡಿ.ಕೆ. ಶಿವಕುಮಾರ್ ನೇರವಾಗಿ ಒಕ್ಕಲಿಗ ಸಮಾಜದವರ ಬಳಿ ನನ್ನನ್ನು ಸಿಎಂ ಮಾಡಲು ನನ್ನೂಂದಿಗೆ ಬನ್ನಿ ಹೇಳ್ತಾ ಇದ್ದಾರೆ. ಇಡಿ ದೇಶವೇ ನನ್ನ ಮನೆ ಎಂದು ಹೇಳುವ ಮೋದಿ ಅವರಿಂದ ನಮಗೆ ಬಹುಮತ ಬರುವ ವಿಶ್ಬಾಸವಿದೆ ಎಂದರು. ನಾವು ರಾಷ್ಟ್ರೀಯವಾದಿಗಳು, ನಮ್ಮನ್ನು ನೀವು ಕೋಮುವಾದಿಗಳು ಎಂದು ಕರೆಯುತ್ತಿದ್ದಿರಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಎದುರಾಳಿಯ ಬಗ್ಗೆ ಗಮನ ಇಟ್ಟವನು ರಾಜಕಾರಣಿ-ಈಶ್ವರಪ್ಪ:ಸಿದ್ದರಾಮಯ್ಯ 224 ಕ್ಷೇತ್ರದಲ್ಲಿ ಎಲ್ಲಿ ನಿಂತರು ಅವರ ಪಕ್ಷದವರೇ ಸೋಲಿಸುತ್ತಾರೆ. ಸಿಎಂ ಆದವರು, ಸಿಎಂ ಆಗಬೇಕಾದರು ಇನ್ನು ಬಸ್ ಯಾತ್ರೆಯಲ್ಲಿಯೇ ಇದ್ದಾರೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರು ಅತಿ ಹೆಚ್ಚು ಮುಸ್ಲಿಮರು ಇರುವಂತಹ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ನಿಮಗೆ ಯಾಕೆ ಚಿಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎದುರಾಳಿಯ ಬಗ್ಗೆ ಗಮನ ಇಟ್ಟವನು ರಾಜಕಾರಣಿ ಎಂದು ಈಶ್ವರಪ್ಪ ಹೇಳಿದರು.
ಐತಿಹಾಸಿಕ ಸಮಾವೇಶ:ಐತಿಹಾಸಿಕ ಮಹಾಸಂಗಮ ದಾವಣಗೆರೆಯಲ್ಲಿ ಮಾ.25ರಂದು ನಡೆಯಲಿದೆ. ಮಹಾಸಂಗಮಕ್ಕೆ ಮೋದಿ ಅವರು ಭಾಗಿಯಾಗಲಿದ್ದಾರೆ. 224 ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸಿದೆ. ದಾವಣಗೆರೆಯ ಸಮಾವೇಶದಲ್ಲಿ ಕನಿಷ್ಠ 10 ಲಕ್ಷ ಜನ ಭಾಗಿಯಾಗಲಿದ್ದಾರೆ. ನಮ್ಮ ಜಿಲ್ಲೆಯಿಂದ 25 ಸಾವಿರ ಜನ ಸೇರಲಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಯಾರು ಮಾಡಿಲ್ಲ. ಇದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟ ಸೂಚನೆ ದೂರಕಿದಂತೆ ಆಗುತ್ತಿದೆ ಎಂದರು. ಪ್ರಧಾನಿ ಮೋದಿ ಅವರು ಬರುತ್ತಿರುವುದರಿಂದ ನಮಗೆ ದೊಡ್ಡ ಶಕ್ತಿ ಬರಲಿದೆ ಎಂದರು.