ಶಿವಮೊಗ್ಗ:ಕೊರೊನಾ ವೈರಸ್ ಶಂಕಿತರ ತಪಾಸಣೆಗಾಗಿ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ನೀಡಲಾಗಿರುವ ಗಂಟಲು ದ್ರವ ಮಾದರಿ(ಸ್ವಾಬ್) ಸಂಗ್ರಹಿಸುವ 2 ಬೂತ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ಬರಪ್ಪ ಶುಕ್ರವಾರ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಉದ್ಘಾಟಿಸಿದ್ದಾರೆ.
ಸ್ವಾಬ್ ಸಂಗ್ರಹ ಬೂತ್ ಉದ್ಘಾಟಿಸಿದ ಸಚಿವ ಕೆ.ಎಸ್. ಈಶ್ವರಪ್ಪ ನಂತರ ಮಾತನಾಡಿದ ಸಚಿವ ಕೆ.ಎಸ್. ಈಶ್ಬರಪ್ಪ, ಕೊರೊನಾ ವೈರಸ್ ಶಂಕಿತರ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಈ ಸ್ವಾಬ್ ಬಹಳ ಉಪಯುಕ್ತವಾಗಿದೆ. ಇದು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಸುರಕ್ಷತೆ ನೀಡುತ್ತದೆ. ಸ್ವಾಬ್ ಸಂಗ್ರಹಿಸುವ ಪ್ರಮಾಣವನ್ನು ಹೆಚ್ಚಿಸಲು ಕೂಡಾ ಇದರಿಂದ ಸಾಧ್ಯ ಎಂದು ಹೇಳಿದರು.
ಸ್ವಾಬ್ ಸಂಗ್ರಹ ಬೂತ್ ವಿಶೇಷತೆ:ಈ ಬೂತ್ ಮೂಲಕ ತ್ವರಿತಗತಿಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಬಹುದಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಜೀವರಕ್ಷಕ ಉಡುಗೆ ಬದಲಿಸುವ ಅಗತ್ಯ ಇರುವುದಿಲ್ಲ ಎನ್ನಲಾಗಿದೆ. ಪ್ರತಿದಿನ ಸುಮಾರು 60 ಸ್ವಾಬ್ ಸಂಗ್ರಹ ಮಾಡಲು ಸಾಧ್ಯವಿದ್ದು 6 ಗಂಟೆಯ ಒಳಗಾಗಿ ಫಲಿತಾಂಶ ಪಡೆಯಬಹುದಾಗಿದೆ.
ಸ್ವಾಬ್ ಸಂಗ್ರಹ ಬೂತ್ ಉದ್ಘಾಟನೆ ವೇಳೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ, ಶಿಮ್ಸ್ ನಿರ್ದೇಶಕ ಡಾ. ಗುರುಪಾದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ, ಡಾ. ರಾಜೇಶ ಸುರಗಿಹಳ್ಳಿ, ಜಿಲ್ಲಾ ಸರ್ಜನ್ ಆರ್. ರಘುನಂದನ್ ಹಾಗೂ ಇನ್ನಿತರರು ಹಾಜರಿದ್ದರು.