ಶಿವಮೊಗ್ಗ: ಕಾಂಗ್ರೆಸ್ನವರು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಬಳಿಕ ವಾಪಸ್ ಪಡೆದಿದ್ದಾರೆ. ಹೀಗೆ ಭ್ರಷ್ಟಾಚಾರಿಗಳೇ ಬಂದ್ಗೆ ಕರೆ ನೀಡಿರುವುದು ಎಷ್ಟು ಸರಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾ. 9ರಂದು ರಾಜ್ಯ ಬಂದ್ಗೆ ಕರೆ ನೀಡಿದ್ದರು. ಬಂದ್ಗೆ ಕರೆ ನೀಡಿದವರು ಭ್ರಷ್ಟಾಚಾರಿಗಳಾಗಿದ್ದು, ನಿಮಗೆ ಬಂದ್ ಕರೆ ನೀಡಲು ಯಾವುದೇ ನೈತಿಕತೆ ಇಲ್ಲ. ಸಿದ್ದರಾಮಯ್ಯ ಅವರು ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್ ನಲ್ಲಿ 8 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿದ ವರದಿಯಲ್ಲಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ. ಸುಮ್ಮನೆ ಕೇಳುತ್ತೇನೆ. ಡಿ.ಕೆ. ಶಿವಕುಮಾರ್ ಮಗಳ ಹೆಸರಿನಲ್ಲಿನ 150 ಕೋಟಿ ರೂ. ಹೇಗೆ ಬಂತು ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡಿದ್ದರಿಂದ ಮುನಿರತ್ನ ಅವರು ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ. ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡುತ್ತಿರುವುದರಿಂದ ಅವರು ಈ ಬಾರಿ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಸಿದ್ದರಾಮಯ್ಯ ಪಕ್ಷಾಂತರಿ - ಈಶ್ವರಪ್ಪ: ಕಾಂಗ್ರೆಸ್ ಗೆ ಬಿಜೆಪಿಯ ಯಾವ ಶಾಸಕ, ಮಂತ್ರಿ ಸೇರಿದ್ದಾರೆ ಎಂದು ಮಾಧ್ಯಮದವರಿಗೆ ಮಾಜಿ ಸಚಿವ ಈಶ್ವರಪ್ಪ ಪ್ರಶ್ನೆ ಮಾಡಿದರು. ಬಿಜೆಪಿಯವರು ಕಾಂಗ್ರೆಸ್ ಸೇರುತ್ತಿರುವ ಕುರಿತು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ ಎಂದು ಕುಟುಕಿದರು. ಮೊದಲು ಜೆಡಿಎಸ್ ನಲ್ಲಿದ್ದರು. ಈಗ ಕಾಂಗ್ರೆಸ್ ನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲಸ ಮಾಡಿ, ಅಧಿಕಾರದಿಂದ ದೂರವಿರಿ ಎಂದು ಕಾಂಗ್ರೆಸ್ ನ ಹೈಕಮಾಂಡ್ ತಿಳಿಸಿದರೆ, ಸಿದ್ದರಾಮಯ್ಯ ಒಂದು ಕ್ಷಣನೂ ಕಾಂಗ್ರೆಸ್ ನಲ್ಲಿ ಇರೋದಿಲ್ಲ. ಸಿದ್ದರಾಮಯ್ಯನವರಿಗೆ ಸಿಎಂ ಅಗುವುದೇ ಧ್ಯೇಯವಾಗಿದೆ ಎಂದರು.