ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ವಿವಾದದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯ ಮೊದಲ ಸಭೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಸಭೆಯಿಂದ ಮಾಧ್ಯಮದವರನ್ನು ಹೊರಗೆ ಇಟ್ಟು ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ಸಿಗಂದೂರು ದೇವಾಲಯದ ಹಣದ ವ್ಯವಹಾರವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಇದ್ದ ಗೊಂದಲ ನಿವಾರಣೆ ಮಾಡಿ, ಪಾರದರ್ಶಕ ಆಡಳಿತ ನಡೆಸಲು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದೇವಾಲಯದಲ್ಲಿ ಹಿಂದೆ ಯಾವ ರೀತಿ ಪೂಜೆ ಕಾರ್ಯಗಳು, ಸೇವೆಗಳು ನಡೆಯುತ್ತಿತ್ತೋ, ಮುಂದೆಯೂ ಸಹ ಹಾಗೆ ಮುಂದುವರೆಯಲಿದೆ. ಆದರೆ, ಇನ್ಮುಂದೆ ದೇವಾಲಯಕ್ಕೆ ಬರುವ ಹರಕೆ ಸೇರಿದಂತೆ ಎಲ್ಲದಕ್ಕೂ ರಶೀದಿ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಒಬ್ಬರನ್ನು ನೇಮಕ ಮಾಡಲಿದ್ದಾರೆ ಎಂದರು.
ಈ ಹಿಂದೆ ಇದ್ದ ಟ್ರಸ್ಟ್ ಹಾಗೆಯೆ ಇರಲಿದೆ. ಈಗ ಹೊಸ ಸಮಿತಿ ರಚನೆ ಮಾಡಿ ಅದರ ಮೂಲಕ ದೇವಾಲಯದ ಉಸ್ತುವಾರಿ ಮಾಡಲಾಗುವುದು. ಸದ್ಯ ಈಗ ದೇವಾಲಯದಲ್ಲಿ ಇರುವ ನೌಕರರನ್ನೇ ಬಳಸಿಕೊಂಡು ದೇವತಾ ಕಾರ್ಯ ನಡೆಸಲಾಗುವುದು ಎಂದರು.