ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮ ದೇವರ ತೆಪ್ಪೋತ್ಸವ ನಿನ್ನೆ ತುಂಗಾ ನದಿಯಲ್ಲಿ ಅದ್ಧೂರಿಯಾಗಿ ಜರುಗಿತು. ಸೀತಾರಾಮರ ಕಲ್ಯಾಣೋತ್ಸವ ಜರುಗಿದ ಮೇಲೆ ನಡೆಸುವ ಉತ್ಸವ ಇದಾಗಿದೆ. ಸುಮಾರು ಎಂಟು ದಿನಗಳ ಕಾಲ ಸೀತಾರಾಮರ ಕಲ್ಯಾಣ ನಡೆಸಲಾಗುತ್ತದೆ. ಕಲ್ಯಾಣೋತ್ಸವದ ಎರಡನೇ ದಿನ ವೈಕುಂಠ ಏಕಾದಶಿ ಬರುತ್ತದೆ. ಕಲ್ಯಾಣೋತ್ಸವ ಮುಗಿಯುವ ಹಿಂದಿನ ದಿನ ಅಂದರೆ ಹುಣ್ಣಿಮೆಯ ದಿನ ತೆಪ್ಪೋತ್ಸವ ನಡೆಸಲಾಗುತ್ತದೆ.
ತೆಪ್ಪೋತ್ಸವಕ್ಕೂ ಮುನ್ನ ಕೋಟೆ ಆಂಜನೇಯ ದೇವಾಲಯದಿಂದ ಸರ್ವಭೂಷಣ ಅಲಂಕೃತವಾಗಿ ಸೀತಾರಾಮ ದೇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ನಂತರ ದೇವರ ಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಿದ ತೆಪ್ಪದಲ್ಲಿ ಕೂರಿಸಿ ನದಿಯಲ್ಲಿ ಸುತ್ತಾಟ ಮಾಡಲಾಗುತ್ತದೆ. ಮದುವೆಯ ನಂತರ ಗಂಡ-ಹೆಂಡತಿಯನ್ನು ಹೇಗೆ ಸುತ್ತಾಟಕ್ಕೆ ಕಳುಹಿಸಲಾಗುತ್ತದೆಯೋ ಹಾಗೆ ತೆಪ್ಪದಲ್ಲಿ ತಿರುಗಾಟ ನಡೆಸಲಾಗುತ್ತದೆ. ನದಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸೀತಾರಾಮರನ್ನು ತೇಲಿಸಲಾಗುತ್ತದೆ. ನಂತರ ಮಹಾ ಮಂಗಳಾರತಿ ನಡೆಸಿ, ದೇವರನ್ನು ಪುನಃ ಸ್ವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎನ್ನುತ್ತಾರೆ ಕೋಟೆ ಆಂಜನೇಯ ದೇವಾಲಯದ ಅರ್ಚಕರಾದ ರಾಮ ಪ್ರಸಾದ್.
ಕಳೆದ 23 ವರ್ಷದಿಂದ ಕೋಟೆ ಶ್ರೀ ಸೀತಾರಾಮ ದೇವರ ತೆಪ್ಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಭಕ್ತರು ಸುಮಾರು 7 ವರೆ ಗಂಟೆಯಿಂದ ದೇವರ ತೆಪ್ಪೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ತುಂಗಾ ನದಿ ಸೇತುವೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದು ಭಕ್ತರಾದ ಡಾ.ಶ್ರೀಧರ್ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಡಿಕೇರಿ: ಇತಿಹಾಸ ಪ್ರಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ