ಸುದ್ದಿಗಾರರೊಂದಿಗೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು. ಶಿವಮೊಗ್ಗ: ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ನೋಡಿರಲಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಇನ್ನಾರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಹೇಳಿರುವುದು ಅನುಭವದ ಬಲದಿಂದ. ಅವರಿಗೆ ಮಾಹಿತಿ ಸಿಕ್ಕಿರಬಹುದು ಎಂದರು.
ಕೃಷಿ ಮಂತ್ರಿ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳು ನಮ್ಮನ್ನು ಲಂಚಗುಳಿತನದಿಂದ ಪಾರು ಮಾಡಿ ಎಂದು ಪತ್ರ ಬರೆದಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದಿರುವ ಅಧಿಕಾರಿಗಳು ನಾವು ಬರೆದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಬೆಂಗಳೂರಿನ ಮಹಾನಗರ ಪಾಲಿಕೆ ಗುತ್ತಿಗೆದಾರರು 15% ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಲಂಚ ಕೇಳಿಲ್ಲ ಎನ್ನುವುದಾದರೆ ದೇವಾಲಯಕ್ಕೆ ಬಂದು ಆಣೆ ಮಾಡಿ ಎಂದು ಹೇಳಿದರು.
ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ಸಿಗೆ ಹೋಗುವುದಾಗಿ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಅಲ್ಲಿರುವ ಮೂವತ್ತಕ್ಕೂ ಹೆಚ್ಚು ಶಾಸಕರು ತಮ್ಮ ಸರ್ಕಾರದಿಂದ ಯಾವುದೇ ಲಾಭವಾಗುತ್ತಿಲ್ಲ ಎಂದು ಸಹಿ ಹಾಕಿ ಸಿಎಂ ಸಿದ್ದರಾಮಯ್ಯಗೆ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಯಾಗುತ್ತಿದೆ. ಬಿಜೆಪಿಗೆ ಬಂದಿರುವ ಕಾಂಗ್ರೆಸ್‌ನ ವಲಸಿಗ ಶಾಸಕರು ಪುನಃ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಬಿಜೆಪಿಗೆ ಬರುವ ಮುನ್ನ ಅವರೆಲ್ಲ ರಾಜೀನಾಮೆ ನೀಡಿ, ಬಿಜೆಪಿ ಚಿಹ್ನೆಯಿಂದ ಗೆದ್ದವರು. ಬಿಎಸ್‌ವೈ ಮತ್ತು ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಅವರೆಲ್ಲ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರ್ಪಡೆ ಆಗುವುದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಮುನಿರತ್ನ ಕೂಡಾ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂಓದಿ: ಕಾಂಗ್ರೆಸ್ ಸೇರುವ ಯಾವುದೇ ಚರ್ಚೆ, ಸಭೆಯಲ್ಲಿ ನಾನು ಭಾಗವಹಿಸಿಲ್ಲ: ಬಿಜೆಪಿ ಶಾಸಕ ಹೆಬ್ಬಾರ್