ಶಿವಮೊಗ್ಗ: ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ನಮ್ಮ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರನ್ನ ಇಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಯಡಿಯೂರಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಪ್ರದಾನ ನಗರದ ಕುವೆಂಪು ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಶಿವಮೊಗ್ಗ ಘಟಕದ ವತಿಯಿಂದ ಯಡಿಯೂರಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಡಿಯೂರಪ್ಪನವರಿಗೆ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹಾಗೂ ಬಸವಕೇಂದ್ರದ ಬಸವಮರುಳಸಿದ್ದ ಸ್ವಾಮಿಗಳು, ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಈಶ್ವರಪ್ಪ ಅವರು, ಯಡಿಯೂರಪ್ಪ ಸಿಎಂ ಆಗದೆ ಹೋಗಿದ್ದರೆ, ಶಿವಮೊಗ್ಗ ಅಭಿವೃದ್ಧಿ ಆಗುತ್ತಿರಲಿಲ್ಲ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರಲಿಲ್ಲ. ಇದರಿಂದ ಬಿಎಸ್ವೈ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ, ಕೆಳದಿ ಶಿವಪ್ಪ ನಾಯಕ ಮನೆತನ ವಿಜಯನಗರ ಮನೆತನದ ನಂತರ ಪ್ರಸಿದ್ಧಿ ಪಡೆದ ಮನೆತನವಾಗಿತ್ತು. ಮಲೆನಾಡು ಹಾಗೂ ಕರಾವಳಿ ಭಾಗವನ್ನು ಆಳ್ವಿಕೆ ಮಾಡಿತ್ತು. ಕೃಷಿ ವಿವಿಗೆ ಕೆಳದಿ ಶಿವಪ್ಪ ನಾಯಕ ಹೆಸರನ್ನು ಇಡಲಾಗಿದೆ. ಶಿವಪ್ಪ ನಾಯಕ ಅರಮನೆ ಅಭಿವೃದ್ಧಿ ಪಡಿಸಲಾಗಿದೆ. ಪೂಜ್ಯರ ಆಶೀರ್ವಾದ ಇದ್ದಾಗ ಮಾತ್ರ ಇನ್ನೂ ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿ ಸಿಗುತ್ತದೆ ಎಂದರು.
ಗೊ.ರು. ಚನ್ನಬಸಪ್ಪನವರು ನನ್ನ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಇಲ್ಲೇ ವೇದಿಕೆ ಮೇಲೆ ಇರುವ ನನ್ನ ಇಬ್ಬರು ಮಕ್ಕಳಾದ ರಾಘವೇಂದ್ರ ಹಾಗೂ ವಿಜಯೇಂದ್ರ ಅವರು ನಮ್ಮಪ್ಪನಲ್ಲಿ ಇಷ್ಟೊಂದು ಸಾತ್ವಿಕ ಗುಣಗಳಿವೆ ಎಂದು ಅಚ್ಚರಿ ಪಟ್ಟಿರಬಹುದು ಎಂದು ಹಾಸ್ಯದ ಚಟಾಕಿ ಹಾರಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರು ಹಾಜರಿದ್ದರು.